ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೧
ಬೆಳೆಯುವ ಬೆಳಕು

“ಹೌದಮ್ಮ, ಬಹಳ ಮಾತನಾಡಿದೆವು. ಈ ಭಾಗದ ವಿಚಾರವನ್ನೆಲ್ಲಾ ಮತ್ತೆಮತ್ತೆ ವಿವರವಾಗಿ ಕೇಳಿದರು. ನಾನು ಎಲ್ಲವನ್ನೂ ಹೇಳಿದೆ. ಇಂದು ನಮ್ಮ ಧರ್ಮ ಪಡೆದಿರುವ ಸಂಕುಚಿತ ಸ್ವರೂಪವನ್ನು ವಿವರಿಸಿದೆ. ಕೇಳಿ ಮರುಗಿದರು. ಅದರ ಉದ್ಧಾರಕ್ಕಾಗಿಯೇ ಕಂಕಣ ಕಟ್ಟಿದವರು ಅವರು.... ನಿನ್ನ ವಿಷಯವನ್ನೂ ಹೇಳಿದೆ.”
“ನನ್ನ ವಿಷಯ! ನನ್ನ ವಿಷಯವೇನು ಹೇಳಿದಿರಿ, ಗುರುಗಳೇ?” ಚಕಿತಳಾಗಿ ಕೇಳಿದಳು ಮಹಾದೇವಿ.
“ಧರ್ಮದಲ್ಲಿ ನಿನಗಿರುವ ಅಪಾರವಾದ ಆಸಕ್ತಿಯನ್ನು ಹೇಳಿದೆ. ಅಣ್ಣನವರು ತುಂಬಾ ಮೆಚ್ಚಿದರು. ಧರ್ಮದಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲ ಎಂಬುದು ಅವರ ದೃಢವಾದ ನಿರ್ಧಾರ. ಇಂದು ಎಷ್ಟೊಂದು ಜನ ಶಿವಶರಣೆಯರು ಕಲ್ಯಾಣದಲ್ಲಿ ತಮ್ಮ ಸಾಧನೆಗೆ ತೊಡಗಿದ್ದಾರೆ, ಬಲ್ಲೆಯಾ? ಅವರೆಲ್ಲರಿಗೂ ಬಸವಣ್ಣನವರೇ ಪ್ರೇರಕರು. ನಿನ್ನ ವಿಚಾರವನ್ನು ನಾನು ಹೇಳಿದಾಗ ತುಂಬಾ ಸಂತೋಷಪಟ್ಟರು. ಆ ಶಕ್ತಿ ಹಾಗೆಯೇ ಬೆಳೆಯಲಿ ಎಂದು ಆಶಿಸಿದರು. ನಿನಗಾಗಿ ಈ ವಚನಗಳ ಕಟ್ಟನ್ನು ಕೊಟ್ಟರು” ಎಂದು ವಚನಗಳುಳ್ಳ ಓಲೆಗರಿಗಳ ಕಟ್ಟನ್ನು ಮಹಾದೇವಿಗೆ ಕೊಡುತ್ತಾ:
“ಇವುಗಳನ್ನು ಚೆನ್ನಾಗಿ ಕಲಿಯಮ್ಮ. ಅಣ್ಣನ ಆಸೆ ನೆರವೇರುವಂತೆ ಮಾಡು. ನಿನ್ನ ಹೃದಯದ ಭಕ್ತಿರಸವೂ ವಚನಗಳ ರೂಪದಲ್ಲಿ ಉಕ್ಕಿ ಅದರೊಡನೆ ಸೇರಲಿ. ಇನ್ನೂ ಶ್ರೀಮಂತಗೊಳ್ಳಲಿ.”
ಮಹಾದೇವಿ ಮೇಲೆದ್ದು ಅದನ್ನು ಸ್ವೀಕರಿಸಿ ಗುರುಗಳಿಗೆ ನಮಸ್ಕರಿಸಿದಳು. ‘ಕಲ್ಯಾಣ’ ಎಂಬ ಮಾತು ಮಂತ್ರ ಸದೃಶವಾಯಿತು ಅವಳಿಗೆ. ಶ್ರೀಶೈಲದ ವರ್ಣನೆಯ ಕೊನೆಯಲ್ಲಿ ‘ಕದಳಿ’ ಎಂಬ ಮಾತು ಅಣ್ಣನ ಕಾರ್ಯಕ್ಷೇತ್ರವಾದ ‘ಕಲ್ಯಾಣ’ ಎಂಬ ಮಂತ್ರದೊಡನೆ ಸೇರಿತು. ‘ಕದಳಿ’, ‘ಕಲ್ಯಾಣ’ ಮಹಾದೇವಿಯ ಸಾಧನೆಯ ಎರಡು ಕಣ್ಣುಗಳಾಗಿ ಪರಿಣಮಿಸಿದುವು. ಜಗತ್ತಿನ ದೃಷ್ಟಿಯಿಂದ ಇನ್ನೂ ಚಿಕ್ಕವಳಾಗಿದ್ದ ಮಹಾದೇವಿಯಲ್ಲಿ ಎಲ್ಲರಿಗೂ ಅಕ್ಕನಾಗುವ ಮಹಾ ಚೈತನ್ಯದ ದಿವ್ಯಶಕ್ತಿ ರೂಪುಗೊಳ್ಳತೊಡಗಿತು.