ಪುಟ:Kadaliya Karpoora.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧

ಕದಳಿಯ ಕರ್ಪೂರ

7

ಬೀಜದಲ್ಲಿರುವ ಸಂಕಲ್ಪಶಕ್ತಿ ಅನುಕೂಲಕರವಾದ ವಾತಾವರಣದಿಂದ ಮೊಳಕೆಯೊಡೆದು ನಳನಳಿಸಿ ಬೆಳೆದು ಹೆಮ್ಮರವಾಗಿ ಪರಿಣಮಿಸುವಂತೆ, ಮಹಾದೇವಿಯ ಚೇತನದ ಆಧ್ಯಾತ್ಮಿಕ ಸಸಿ, ಸುಂದರವಾಗಿ ಬೆಳೆಯತೊಡಗಿತ್ತು. ತನ್ನ ಎಳೆಯತನವನ್ನು ಕಳೆದುಕೊಂಡು ಉಜ್ವಲವಾದ ಹೊಳಪನ್ನು ಬೀರುತ್ತಾ ವಿಕಾಸಗೊಳ್ಳುತ್ತಿತ್ತು.

ಇಂದು ಮಹಾದೇವಿ ಕೌಮಾರ್ಯವನ್ನು ದಾಟಿ ನವಯೌವನದ ಹೊಸಲಲ್ಲಿ ನಿಂತಿರುವ ಸುಂದರತರುಣಿ. ಅವಳ ಅಂಗಸೌಷ್ಠವ, ಲಾವಣ್ಯರಸದಿಂದ ಆದರ್ರ್‌ವಾದ ಮೋಹಕವಾದ ಕಾಂತಿಯನ್ನು ಹೊರಹೊಮ್ಮಿಸುತ್ತಿತ್ತು. ಆದರೆ ಆಕರ್ಷಕವಾದ ದೇಹಸೌಂದರ್ಯದ ಆ ತೆರೆಯ ಹಿಂದೆ, ಸೌಂದರ್ಯರೂಪಿಣಿಯಾದ ಜಗಜ್ಜನನಿಯ ಅಪಾರವಾದ ಕಾರುಣ್ಯವೇ ಮೂರ್ತಿವೆತ್ತಂತೆ ಮಹಾದೇವಿಯ ಮಧುರಭಕ್ತಿ ರೂಪುಗೊಂಡಿತ್ತು. ಸೌಂದರ್ಯಕ್ಕೆ ಪವಿತ್ರತೆಯನ್ನು ತಂದುಕೊಟ್ಟಿತ್ತು.

ಗುರುಲಿಂಗದೇವರ ನಿರೀಕ್ಷಣೆಗಿಂತಲೂ ಅಧಿಕವಾಗಿ ಅವಳ ಆಧ್ಯಾತ್ಮಿಕ ಸಾಧನೆ ಮುಂದುವರಿದಿತ್ತು. ಕಲ್ಯಾಣದಲ್ಲಿ ತಾವು ಕಂಡ ಬಸವಣ್ಣನವರ ವ್ಯಕ್ತಿತ್ವವನ್ನೂ ಅವರ ಕಾರ್ಯಕ್ಷೇತ್ರದ ಮಹಿಮೆಯನ್ನೂ ಶರಣಮಾರ್ಗದ ರಹಸ್ಯವನ್ನೂ ತಾವು ತಿಳಿದಷ್ಟರಮಟ್ಟಿಗೆ ವಿವರಿಸುತ್ತಿದ್ದರು. ಅವರು ತಂದುಕೊಟ್ಟ ಅಣ್ಣನವರ ವಚನಗಳಂತೂ ಮಹಾದೇವಿಯ ಕಣ್ಣುಮುಂದೆ ಹೊಸದೊಂದು ಸಾಧನೆಯ ಪ್ರಪಂಚವನ್ನೇ ತೆರೆದು ತೋರಿಸಿದ್ದುವು. ದಿನಗಳು ಕಳೆದಂತೆಲ್ಲಾ ಹೊಸ ಹೊಸ ಅರ್ಥ, ಅಣ್ಣನವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಬಸವಣ್ಣನವರ ಭಕ್ತಿಹೃದಯದ ತಳಮಳ, ಮಹಾದೇವಿಯ ಅಂತರಂಗದಲ್ಲಿ ತಾದಾತ್ಮ್ಯವನ್ನು ಪಡೆದಿತ್ತು. ತನ್ನ ಹೃದಯದ ಭಾವನೆಗಳಿಗೇ ಅಣ್ಣ ವ್ಯಕ್ತಸ್ವರೂಪವನ್ನು ಕೊಟ್ಟಂತೆ ಅನಿಸುತ್ತಿತ್ತು. ತಾನೂ ಅದರಲ್ಲಿ ದನಿಗೂಡುತ್ತಿದ್ದಳು.

ಎನ್ನ ಕಾಯವ ದಂಡಿಗೆಯ ಮಾಡಯ್ಯ;

ಎನ್ನ ಶಿರವ ಸೋರೆಯ ಮಾಡಯ್ಯ;

ಎನ್ನ ನರವ ತಂತಿಯ ಮಾಡಯ್ಯ;

ಬತ್ತೀಸರಾಗವ ಹಾಡಯ್ಯ; ಉರದಲೊತ್ತಿ ಬಾರಿಸು

ಕೂಡಲ ಸಂಗಮದೇವಾ

ಈ ವಚನವನ್ನು ಅದೆಷ್ಟು ಬಾರಿ ಹೇಳಿಕೊಂಡಿದ್ದಳೋ! ಅಲ್ಲದೆ:

ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟ,