ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೪೩


ಪುರುಷನ ಒಲವಿಲ್ಲದ ಲಲನೆಯಂತಾಗಿದ್ದೆನಯ್ಯಾ!
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ, ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯಾ!
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವಾ

ಎಂಬ ವಚನವಂತೂ ಅವಳಿಗೆ ಮಂತ್ರದಂತಾಗಿತ್ತು. ಬಸವಣ್ಣನವರು ತಾವು ಸತಿಯ ಭಾವನೆಯನ್ನು ಕಲ್ಪಿಸಿಕೊಂಡು ಹಾಡಿದ್ದರೆ, ಮಹಾದೇವಿಯದು ಮಲ್ಲಿಕಾರ್ಜುನನಿಗೆ ಮೀಸಲಾದ ಹೆಣ್ಣುಹೃದಯ. ಆ ಮಧುರಭಕ್ತಿಯ ಮಧು, ಅವಳ ಅಂತರಂಗದಲ್ಲಿ ಅತಿ ಸಹಜವಾಗಿ ಮಡುಗಟ್ಟಿನಿಂತಿತ್ತು. ಅದಕ್ಕೆ ತಾನೂ ವಚನಗಳ ರೂಪದಲ್ಲಿ ವ್ಯಕ್ತಸ್ವರೂಪವನ್ನು ಕೊಡಬೇಕೆಂದು ಹಂಬಲಿಸುವಳು. ಅದಕ್ಕೆ ಗುರುಲಿಂಗದೇವರ ಪ್ರೋತ್ಸಾಹವೂ ಇತ್ತು.

“ನಿನ್ನ ಹೃದಯದ ಭಕ್ತಿರಸ, ವಚನಗಳ ರೂಪದಲ್ಲಿ ಉಕ್ಕಿ ಈ ವಚನ ಸಾಹಿತ್ಯದೊಡನೆ ಸೇರಬೇಕು.” ಎಂದು ಹಿಂದೆ ಅವರು ಹೇಳಿದ ಮಾತು ಅಚ್ಚೊತ್ತಿದಂತಿತ್ತು. ಇನ್ನೂ ಅನೇಕ ಸಂದರ್ಭಗಳಲ್ಲಿ ತಮ್ಮ ಆಸೆಯನ್ನು ಆಡಿಯೂ ತೋರಿಸಿದ್ದರು, ಅವಳ ಆಕಾಂಕ್ಷೆಗೆ ಪ್ರಚೋದನೆಯನ್ನಿತ್ತಿದ್ದರು. ಮಹಾದೇವಿಯಲ್ಲಿ ಆ ಶಕ್ತಿ ಆಗಾಗ ಮಿಂಚುತ್ತಲೂ ಇತ್ತು. ಒಮ್ಮೆ ಪೂಜೆಯಲ್ಲಿ ತೊಡಗಿದ್ದಾಗ, ಇದ್ದಕ್ಕಿದಂತೆಯೇ ಒಂದು ವಚನ ಹೊಳೆದಿತ್ತು: ‘ನರಜನ್ಮವನ್ನು ಕಳೆದು, ಹರಜನ್ಮವನ್ನು ಪಡೆದು, ಹರನನ್ನು ನಾನು ಪೂಜಿಸುತ್ತಿದ್ದೇನೆ. ಇಂದಲ್ಲ ನಾಳೆ ಹರನನ್ನು ಪಡೆದೇ ಪಡೆಯುತ್ತೇನೆ’ ಎಂಬ ಭಾವನೆ ಪೂಜಾಸಮಯದಲ್ಲಿ ಸುಳಿಯಿತು. ಆ ಭಾವನೆಯಿಂದ ಅವಳಲ್ಲಿ ಒಂದು ಅಪೂರ್ವವಾದ ಆನಂದದ ಅನುಭವ ಸಂಚಾರವಾದಂತಾಯಿತು. ‘ನರಜನ್ಮವನ್ನು ಕಳೆದು, ಹರಜನ್ಮವನ್ನು ಕೊಟ್ಟಿದ್ದಾನೆ ಗುರು. ಅವನ ಕರುಣೆಯ ಫಲದಿಂದ ನಾನು ಭವಿ ಎಂಬುದನ್ನು ಕಳೆದು ಭಕ್ತೆಯೆಂದೆನಿಸಿದ್ದೇನೆ. ಭವಬಂಧನವನ್ನು ದಾಟಿ ಪರಮಸುಖವನ್ನು ಕಂಡುಕೊಳ್ಳುವ ಮಾರ್ಗದಲ್ಲಿದ್ದೇನೆ’-ಎಂದು ಮುಂತಾದ ಭಾವಗಳು ಸುಳಿದವು. ಅದೊಂದು ವಚನರೂಪದಲ್ಲಿ ಹೊರಬಿತ್ತು ಹಾಡಿದಳು:
ನರಜನ್ಮವ ತೊಡೆದು, ಹರಜನ್ಮವ ಮಾಡಿದ ಗುರುವೇ,
ಭವಬಂಧನವ ಬಿಡಿಸಿ, ಪರಮಸುಖವ ತೋರಿದ ಗುರುವೇ,