ಕ್ಷಣಕಾಲ ನೀರವವಾಗಿದ್ದ ಗುರುಗಳು ಎಚ್ಚತ್ತವರಂತೆ ಸುತ್ತಲೂ ನೋಡುತ್ತ: “ಓ! ಕತ್ತಲಾಗುತ್ತ ಬಂದಿತಲ್ಲಮ್ಮ ಮಹಾದೇವಿ. ಒಬ್ಬಳೇ ಮನೆಗೆ ಹೇಗೆ ಹೋಗುತ್ತೀಯಾ? ತಾಳು ಗುರುಪಾದಪ್ಪನನ್ನು ಕರೆಯುತ್ತೇನೆ” ಎನ್ನುತ್ತಾ ಎದ್ದರು.
“ಏನು ಬೇಡಿ ಗುರುಗಳೇ, ಇನ್ನೂ ಸ್ವಲ್ಪ ಬೆಳಕಿದೆ, ಅಲ್ಲದೆ ಅದೆಷ್ಟು ದೂರ ಮಹಾ, ಈಗ ಹೋಗಿಬಿಡುತ್ತೇನೆ.”
“ಹಾಗಲ್ಲಮ್ಮಾ.... ಈಗ ಒಬ್ಬಳೇ ಹೋಗಬಾರದು” ಎನ್ನುತ್ತಾ ಹೋಗಿ ಗುರುಪಾದಪ್ಪನನ್ನು ಕರೆದರು. ಆತನನ್ನು ಜೊತೆಮಾಡಿ ಕಳುಹಿಸಿಕೊಟ್ಟರು.
ಆಕೆ ಚಿಕ್ಕವಳಿರುವಾಗ ಅನೇಕ ಸಾರಿ, ಇದಕ್ಕಿಂತ ಕತ್ತಲಾದಮೇಲೂ ಒಬ್ಬಳೇ ಹೋಗುತ್ತಿದ್ದಳು. ಆಗ ಅದನ್ನು ಗುರುಗಳು ಅಷ್ಟಾಗಿ ಲಕ್ಷಿಸುತ್ತಿರಲಿಲ್ಲ. ಆದರೆ ಈಗ ಒಮ್ಮೊಮ್ಮೆ ಹೀಗೇನಾದರೂ ಹೊತ್ತಾದರೆ ಅವಳೊಬ್ಬಳನ್ನೇ ಎಂದೂ ಕಳುಹಿಸಿಕೊಡುತ್ತಿರಲಿಲ್ಲ. ತಮಗೆ ತೀರಾ ಆಪ್ತರಾದವರು ಯಾರನ್ನಾದರೂ ಕರೆದು ಜೊತೆಗೆ ಕಳುಹಿಸುತ್ತಿದ್ದರು-ಇದನ್ನು ಕುರಿತು ಆಲೋಚಿಸುತ್ತಾ ಮಹಾದೇವಿ, ಗುರುಪಾದಪ್ಪನ ಜೊತೆಯಲ್ಲಿ ನಡೆಯುತ್ತಿದ್ದಳು.
ಗುರುಲಿಂಗದೇವರ ಮಠ ಇದ್ದುದು ಊರ ಮುಂದಿರುವ ರಾಜ್ಯೋದ್ಯಾನದಿಂದ ಆಚೆ ಸ್ವಲ್ಪ ದೂರದಲ್ಲಿ. ಅಲ್ಲಿಂದ ನಡೆದು ರಾಜೋದ್ಯಾನವನ್ನು ದಾಟಿ ರಾಜಬೀದಿಗೆ ಬಂದು ಸೇರಿದರೆ ಸಾಕು, ಅಲ್ಲಿಂದ ಊರು ಪ್ರಾರಂಭವಾಗುತ್ತಿತ್ತು. ಅಲ್ಲಿಯವರೆಗೂ ಬಂದಿದ್ದರು, ಓಂಕಾರನೇ ಅಲ್ಲಿ ಬಂದು ನಿಂತಿದ್ದ ರಾಜಬೀದಿಯ ಕೊನೆಯಲ್ಲಿ.
“ಇದೇನು ಓಂಕಾರಶೆಟ್ಟರೇ, ಇಲ್ಲಿಯೇ ನಿಂತುಬಿಟ್ಟಿರಿ?” ಗುರುಪಾದಪ್ಪ ಕೇಳಿದ.
“ಮಹಾದೇವಿ ಏಕೋ ಇನ್ನೂ ಬರಲಿಲ್ಲವೆಂದು ನಾನೇ ಮಠದ ಕಡೆಗೆ ಬರುತ್ತಿದ್ದೆ. ನೀವು ಬರುತ್ತಿರುವುದು ಕಾಣಿಸಿತು. ಇಲ್ಲೇ ನಿಂತುಕೊಂಡೆ” ಎಂದು ಮಗಳತ್ತ ತಿರುಗಿ, “ಇಷ್ಟು ಹೊತ್ತು ಏನು ಮಾಡುತ್ತಿದ್ದೆಯಮ್ಮ, ಮಹಾದೇವಿ?” ಎಂದ.
“ಗುರುಗಳ ಹತ್ತಿರ ಮಾತನಾಡುತ್ತಾ ಕುಳಿತುಬಿಟ್ಟೆ, ಹೊತ್ತಾಗಿಹೋಯಿತಪ್ಪ” ಎಂದು ಗುರುಪಾದಪ್ಪನ ಕಡೆಗೆ ತಿರುಗಿ:” ಇನ್ನು ನೀವು ಹೋಗಬಹುದಲ್ಲ? ಮತ್ತೇಕೆ ಅಲ್ಲಿಯವರೆಗೆ?” ಎಂದಳು.
“ಹೌದಮ್ಮ.... ನಾನು ಬರಲೇ, ಶೆಟ್ಟರೇ...ನನಗೂ ಮಠದಲ್ಲಿ ಸ್ವಲ್ಪ ಕೆಲಸವಿತ್ತು” ಎಂದು ಮಠದ ಕಡೆಗೆ ಹಿಂತಿರುಗಿದ ಗುರುಪಾದಪ್ಪ.