ಓಂಕಾರ ಮಹಾದೇವಿಯರು ನಾಲ್ಕು ಹೆಜ್ಜೆ ಮುಂದೆ ಹೋಗಿದ್ದರು. ಅಷ್ಟರಲ್ಲಿ ಎದುರಿನಿಂದ ಬಂದ ಮಾರ್ತಾಂಡಪ್ಪ. ಮಾಡಲು ಕೆಲಸವಿಲ್ಲದೆ, ಹಿರಿಯರ ಆಸ್ತಿಯನ್ನು ತಿಂದು ತಿರುಗುತ್ತಿದ್ದವನು ಅವನು. ಊರಿನ ಅಂಥದೇ ಒಂದು ಸಣ್ಣ ಗುಂಪಿಗೆ ಮುಖಂಡನಾಗಿದ್ದ. ಓಂಕಾರನನ್ನೂ ಮಹಾದೇವಿಯನ್ನೂ ಕಂಡು ಕೇಳಿದ :
“ಏನು ಓಂಕಾರ ಶೆಟ್ಟರೇ, ಈಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀರೋ ? ನಿಮಗೆ ಇದೊಂದು ಕೆಲಸವೇ ಆಗಿಹೋಯಿತಲ್ಲವೇ?” ಎಂದು ವ್ಯಂಗ್ಯವಾಗಿ ನಗುತ್ತಾ ಮಹಾದೇವಿಯತ್ತ ನೋಡಿ ಮುಂದೆ ನಡೆದ.
ಸ್ವಲ್ಪ ದೂರ ಮೌನವಾಗಿ ನಡೆದರು ತಂದೆ ಮಕ್ಕಳು. ನಂತರ ಓಂಕಾರ ಹೇಳಿದ :
“ಮಠದಲ್ಲಿ ನೀನು ಇಷ್ಟುಹೊತ್ತು ಇರಬಾರದಮ್ಮಾ. ನೀನೇನು ಹಿಂದಿನ ಹಾಗೆ ಚಿಕ್ಕವಳಲ್ಲ. ಅನ್ನುವವರಿಗೆ ಆಡಿಕೊಳ್ಳುವವರಿಗೆ ಒಂದು ಅವಕಾಶವಾಗುತ್ತದೆ.”
ಈ ಮಾತು ಮಹಾದೇವಿಯನ್ನು ಮೌನವನ್ನಾಗಿ ಮಾಡಿತು. ಈ ಮಾತಿನ ಸತ್ಯ ಈಗ ಹೆಜ್ಜೆ ಹೆಜ್ಜೆಗೂ ಅನುಭವಕ್ಕೆ ಬರತೊಡಗಿತ್ತು ಮಹಾದೇವಿಗೆ.
“ಇನ್ನೂ ಚಿಕ್ಕ ಹುಡುಗಿಯಂತೆ ಆಡುತ್ತಾಳೆ. ಮದುವೆಯಾಗಿದ್ದರೆ ಮೂರು ಮಕ್ಕಳಾಗುತ್ತಿದ್ದುವು."
“ಇನ್ನೂ ಮಠಕ್ಕೆ ಹೋಗುತ್ತಾಳೆ ? ಹೆಂಗಸರಿಗೇಕಮ್ಮ ಅದೆಲ್ಲಾ ?”
“ಅವಳದೇನು ತಪ್ಪು, ಇನ್ನೂ ಮದುವೆ ಮಾಡದೆ ಹಾಗೆ ಬಿಟ್ಟಿದ್ದಾರಲ್ಲ, ಅವರಿಗೇನು ಹೇಳಬೇಕು ?” - ಇಂತಹ ಅನೇಕ ಮಾತುಗಳು ಆಗಾಗ ಅವಳ ಕಿವಿಯ ಮೇಲೆ ಬೀಳುತ್ತಿದ್ದುವು.
ನಿಜ, ಮಹಾದೇವಿಯ ಗೆಳತಿಯರೆಲ್ಲರಿಗೂ ಆಗಲೇ ಮದುವೆಯಾಗಿದೆ. ಶಂಕರಿಗೆ ಈ ವರ್ಷ ಮದುವೆಯಾಯಿತು. ಆದರೆ ಇನ್ನೂ ತವರು ಮನೆಯನ್ನು ಬಿಟ್ಟಿಲ್ಲ. ಆಷಾಡಮಾಸ ಕಳೆಯುವುದನ್ನೇ ಕಾಯುತ್ತಿದ್ದಾನೆ. ಕಾತ್ಯಾಯಿನಿ ಹೋದ ವರ್ಷವೇ ಗಂಡನ ಮನೆಗೆ ಹೋದವಳು ಈ ವರ್ಷ ತಾಯಾಗುವ ಸಂತೋಷದಿಂದ ಬಂದಿದ್ದಾಳೆ ತವರೂರಿಗೆ. ದಾಕ್ಷಾಯಿಣಿಯಂತೂ ಈಗಾಗಲೇ ಒಂದು ಮಗುವಿನ ತಾಯಿ.
ಮೊನ್ನೆಯ ದಿನ ಆಕೆ ಮಹಾದೇವಿಯನ್ನು ನೋಡಲು ಬಂದಾಗ ಮಗುವನ್ನೆತ್ತಿಕೊಂಡೇ ಬಂದಿದ್ದಳು. ಅವಳ ಮಗುವನ್ನೆತ್ತಿಕೊಂಡು ಆಟವಾಡುತ್ತಿರುವಾಗ ದಾಕ್ಷಾಯಿಣಿ ಕೇಳಿದ್ದಳು :