ಪುಟ:Kadaliya Karpoora.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭

ಬೆಳೆಯುವ ಬೆಳಕು

``ಏನು ಮಹಾದೇವಿ, ನೀನಾವಾಗ ಇಂತಹ ಮಗುವನ್ನು ಪಡೆಯುವುದು?" ಅದನ್ನು ನೆನೆಸಿಕೊಂಡು ಮಹಾದೇವಿ ಯಾರು ಏನನ್ನು ಮಾತನಾಡಿದರೂ ಕೊನೆಗೆ ಅದು ಅಲ್ಲಿಗೆ ಬಂದು ನಿಲ್ಲುವುದು. `ಮದುವೆ, ಮಗು, ಗಂಡ, ಹೆಂಡತಿ.' - ಇದಲ್ಲಿಯೇ ಪರಿಸಮಾಪ್ತಿ. ಇದನ್ನು ಬಿಟ್ಟು ಬಾಳುವುದು ಸಾಧ್ಯವೇ ಇಲ್ಲವೇ? ಇದೇ ಜೀವನದ ಗುರಿಯೇ? `ಎಷ್ಟೊಂದು ಸಹಜವಾಗಿ ಈ ಜೀವನಪ್ರವಾದಲ್ಲಿ ಎಲ್ಲರೂ ತೇಲಿಹೋಗುತ್ತಿದ್ದಾರೆ....' ಎಂದು ಆಲೋಚಿಸುತ್ತಿದ್ದಂತೆಯೇ ತನ್ನ ಗೆಳತಿಯರ ನೆನಪು ಅವಳ ಕಣ್ಣೆದುರು ಸುಳಿಯಿತು :

`ನಾವೆಲ್ಲಾ ಜೊತೆಯಲ್ಲಿ ಆಟವಾಡುತ್ತಿದ್ದವರು. ಇಂದು ಅವರಲ್ಲಿ ಎಷ್ಟೊಂದು ಬದಲಾವಣೆ ? ದಾಕ್ಷಾಯಿಣಿ ಹೆಮ್ಮೆಯಿಂದ ತನ್ನ ಮಗುವನ್ನು ಮುದ್ದಿಸುತ್ತಿದ್ದಾಳೆ. ತಾಯಾಗಲಿರುವ ಕಾತ್ಯಾಯಿನಿಯ ಸಂಭ್ರಮವಂತೂ ಹೇಳತೀರದು. ಇನ್ನು ಶಂಕರಿ ;- ನಾವು ಎಷ್ಟೊಂದು ಆತ್ಮೀಯ ಗೆಳತಿಯರಾಗಿದ್ದೆವು ! ಆದರೆ ಇಂದು ನನ್ನನ್ನಿರಲಿ, ತಾನು ಹುಟ್ಟಿ ಬೆಳೆದ ಮನೆಯನ್ನೇ ಬಿಟ್ಟುಹೋಗಲು ಎಷ್ಟು ಸಂಭ್ರಮ! ಇಷ್ಟೊಂದು ಪ್ರಬಲವಾದ ಆಕರ್ಷಣೆಯನ್ನುಂಟುಮಾಡುತ್ತಿರುವ ಆ ಶಕ್ತಿ ಯಾವುದು ? ಜೀವನಕ್ಕೆ ಅತ್ಯನಿವಾರ್ಯವಾದ ಶಕ್ತಿಯಾಗಿರಬಹುದೇ ಅದು? ಹಾಗಾದರೆ ನನ್ನದು ಅಸಹಜವಾದ ಪ್ರವೃತ್ತಿಯೇ?... ಆದರೆ ಇವುಗಳನ್ನೆಲ್ಲಾ ನನಗೇಕೆ ಸಂತೋಷ ತೋರುವುದಿಲ್ಲ ? `ಇದೆಲ್ಲಾ ನಿನ್ನ ಗುರಿಯಲ್ಲ ! ನಿನ್ನ ಮಾರ್ಗವಲ್ಲ' ಎಂದು ಯಾರೋ ಹೇಳಿದಂತಾಗುತ್ತಿದೆಯಲ್ಲ. ಮದುವೆಯೆಂದರೆ ಚೆನ್ನಮಲ್ಲಿಕಾರ್ಜುನನಲ್ಲದೆ, ಇನ್ನಾವ ರೂಪೂ ನನ್ನ ಕಣ್ಣುಮುಂದೆ ಬರುವುದೇ ಇಲ್ಲ. ಇಹಕ್ಕೊಬ್ಬ ಗಂಡ, ಪರಕೊಬ್ಬ ಗಂಡನೇ ? ಅವನೊಬ್ಬನನ್ನೇ ಪತಿಯನ್ನಾಗಿ ಪಡೆಯುವುದು ಸಾಧ್ಯವೇ ಇಲ್ಲವೇ ? ಅಥವಾ ಅದು `ಸಾಧು'ವಲ್ಲವೆ ? `ಸಾಧು' ಎಂದೇನೋ ಗುರುಗಳು ಹೇಳುತ್ತಾರೆ. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲವೆಂದು ಎಚ್ಚರಿಸುತ್ತಾರೆ. ನಾನದನ್ನು ಸಾಧ್ಯವನ್ನಾಗಿ ಮಾಡಿತೋರಿಸುತ್ತೇನೆ. ನನಗೆ ಒಬ್ಬನೇ ಗಂಡ. ಅವನು ಚೆನ್ನಮಲ್ಲಿಕಾರ್ಜುನ. ಅವನು ಮಕ್ಕಳನ್ನು ಕೊಡುವ ಗಂಡನಲ್ಲ ; ಮೋಕ್ಷವನ್ನು ಕೊಡುವ ಗಂಡ. ಅವನನ್ನು ಪಡೆಯುವುದೇ ನನ್ನ ಜೀವನದ ಗುರಿ.'

ಇದು ಮಹಾದೇವಿಯ ಮನಸ್ಸಿನಲ್ಲಿ ಅನೇಕ ರೀತಿಯಲ್ಲಿ ಸುಳಿದಾಡುತ್ತಿದ್ದ ಆಲೋಚನಾ ತರಂಗಗಳ ಒಂದು ತೆರೆ.

ಕೆಲವು ದಿನಗಳ ಹಿಂದೆ ಗೆಳತಿಯರೆಲ್ಲಾ ಸೇರಿ ಹಾಸ್ಯ ಮಾಡುತ್ತಾ :

``ಯಾವಾಗಮ್ಮ ನಿನ್ನ ಮದುವೆ ?... ಇವಳು ಕೈ ಹಿಡಿಯುವ ಗಂಡ