ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಕದಳಿಯ ಕರ್ಪೂರ

ಎಂತಹವನು ಬರುತ್ತಾನೋ ಭಾಗ್ಯಶಾಲಿ...' ಎಂದು ನಕ್ಕಿದ್ದರು. ಆಗ ಅವರಿಗೆ ಹೇಳಿದ್ದಳು ಮಹಾದೇವಿ:

ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೇ ನವಿಲು?
ಕೊಳನಲ್ಲದೆ ಕಿರಿವಳ್ಳ ಕಾಳಸುವುದೇ ಹಂಸೆ?
ಮಾಮರ ತಳಿತಲ್ಲದೆ ಸ್ವರಗೈವುದೇ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೇ ಭ್ರಮರ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನಲ್ಲದೇ ಅನ್ಯಕ್ಕೆಳಸುವುದೇ,
ಎನ್ನ ಮನ? ಕೇಳಿರೇ ಕೆಳದಿಯರಿರಾ.

ಆದರೆ ಇದನ್ನು ಹಿಂಬಾಲಿಸಿ ಇನ್ನೊಂದು ತೆರೆ ಮೇಲೇಳುವುದು:

"ಅವಳದೇನು ತಪ್ಪು, ಮದುವೆ ಮಾಡದೆ ಹಾಗೇ ಬಿಟ್ಟಿದ್ದಾರಲ್ಲ, ಅವರಿಗೇನು ಹೇಳಬೇಕು!" ಎಂಬ ಜನರ ನಿಂದೆಯ ನುಡಿ ಸುಳಿಯುವುದು.

'ನಿಜ, ನನ್ನಿಂದ ನನ್ನ ತಂದೆತಾಯಿಗಳು ಕೊರಗುವಂತಾಗಿದೆ. ನನ್ನನ್ನು ಜನ ಆಡಿಕೊಂಡರೆ ಅದನ್ನು ಕಸಕ್ಕಿಂತ ಕಡೆಯಾಗಿ ನಾನು ಕಾಣಬಲ್ಲೆ. ಆದರೆ ತಂದೆತಾಯಿಗಳ ಮೂಕವೇದನೆಯನ್ನು ಎಂತು ಸಹಿಸಲಿ. ಜನರು ಇಷ್ಟೊಂದು ಆಡಿಕೊಳ್ಳುತ್ತಿದ್ದರೂ ಇದುವರೆಗೂ ಅವರು ಅದನ್ನು ಸಹಿಸಿಕೊಂಡಿದ್ದಾರೆ. ಇನ್ನೂ ಎಷ್ಟು ಕಾಲ ಅವರಿಗೆ ಆ ಕೊರಗನ್ನು ಕೊಡಲಿ... ಹಾಗೆಂದು ಯಾರನ್ನಾದರೂ ಮದುವೆ ಮಾಡಿಕೊಂಡು.... 'ಛೇ, ಅದನ್ನು ನನ್ನ ಮನಸ್ಸು ಊಹಿಸಲು ಸಮರ್ಥವಾಗದು. 'ಹೀಗೆ ಅವಳ ಮನಸ್ಸು ಮತ್ತೆ ಹೊರಟಲ್ಲಿಗೇ ಬರುತ್ತಿತ್ತು. ಮತ್ತೆ ಮತ್ತೆ ಒಳತೋಟಿಗೆ ಗುರಿಯಾಗುತ್ತಿತ್ತು.

'ಹಾಗಾದರೆ ಈ ಉಭಯ ಸಂಕಟದಿಂದ ಹೇಗೆ ಪಾರಾಗಬಲ್ಲೆ?' ಎಂದು ಯಾರೋ ಕೇಳಿದಂತಾಗುತ್ತಿತ್ತು.

'ನೋಡೋಣ. ತಂದೆತಾಯಿಗಳು ಇನ್ನೂ ಮದುವೆ ಒತ್ತಾಯವನ್ನು ತಂದಿಲ್ಲ. ನನ್ನ ಇಷ್ಟದಂತೆಯೇ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಅದು ಹಾಗೆಯೇ ಮುಂದುವರಿಯಲಿ ಎಂದು ಮಲ್ಲಿಕಾರ್ಜುನನನ್ನು ಪ್ರಾರ್ಥಿಸುತ್ತೇನೆ' ಎಂದು ಅವನ ಮೊರೆಹೋಗುತ್ತಿದ್ದಳು.

ಆದರೆ ತನ್ನ ಮೀಸಲುವಧು ತನ್ನ ಮೇಲಿಟ್ಟಿರುವ ಪ್ರೇಮದ ಉತ್ಕಟತೆಯನ್ನು ಪರೀಕ್ಷಿಸಲೋಸ್ಕರವೋ ಎಂಬಂತೆ ಮಲ್ಲಿಕಾರ್ಜುನ ಅವಳ ಪರೀಕ್ಷೆಯನ್ನು ಕಠಿಣತರಗೊಳಿಸುತ್ತಿದ್ದ.