ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ ಕದಳಿಯ ಕರ್ಪೂರ
“ಇಲ್ಲ ಮಗಳೇ, ಮಲ್ಲಿಕಾರ್ಜುನನ ದೃಷ್ಟಿಯಲ್ಲಿ ಹೆಂಗಸರು ಗಂಡಸರು ಎಂಬ ತಾರತಮ್ಯವಿಲ್ಲ. ಆದರೆ ನೀನಿನ್ನೂ ಚಿಕ್ಕವಳು ಎಂದು ಹೇಳಿದೆ ಅಷ್ಟೆ. ನಾನುಹೋಗಿ ಬಂದು ಅದರ ಮಾರ್ಗವನ್ನೆಲ್ಲಾ ನಿನಗೆ ತಿಳಿಸುತ್ತೇನೆ. ಆಮೇಲೆ ನೀವೆಲ್ಲರೂ ಹೋಗಿಬರುವಿರಂತೆ. ನಾನು ಬರುವುದರೊಳಗೆ, ನಾನು ಹೇಳಿಕೊಟ್ಟ ಆ ವಚನಗಳನ್ನೆಲ್ಲಾ ಕಲಿತಿರಬೇಕು. ಜಾಣೆ, ನಮ್ಮ ಮಹಾದೇವಿ!” ಎಂದು ತಲೆದಡವಿ ಸಂತೈಸಿದ್ದರು.

ಅಂದಿನಿಂದ ಮಹಾದೇವಿಗೆ ಶ್ರೀಶೈಲದ ಹಂಬಲವೇ ಹಂಬಲ. ದಿನಕ್ಕೊಮ್ಮೆ ಯಾದರೂ ಅದರ ಪ್ರಸ್ತಾಪ ಬಂದೇ ಬರುತ್ತಿತ್ತು.
“ಅವ್ವಾ, ಶ್ರೀಶೈಲ ಬಹಳ ದೊಡ್ಡ ಪರ್ವತವಂತೆ, ಹೌದೇನವ್ವಾ?”
“ಏನೋಮ್ಮ, ಹಾಗೆ ಹೇಳುತ್ತಾರೆ, ನಾನೇನು ನೋಡಿದ್ದೇನೆಯೇ?” ಲಿಂಗಮ್ಮ ಹೇಳುವಳು.
“ತಾಯಿಯ ಮಾತಿನಿಂದ ತೃಪ್ತಳಾಗದೆ ತಂದೆಯ ಬಳಿಗೆ ಬರುವಳು:
“ಅಪ್ಪಾ, ಮಲ್ಲಿಕಾರ್ಜುನನ ದೇವಸ್ಥಾನ ಆ ಬೆಟ್ಟದಲ್ಲಿ ಹೇಗಿದೆಯಪ್ಪಾ! ಆ ಭಯಂಕರ ಕಾಡಿನಲ್ಲಿ ಅವನೊಬ್ಬನೇ ಹೇಗಿರುತ್ತಾನಪ್ಪಾ?”
“ಅವನಿಗೇನು ಹೆದರಿಕೆ, ಮಹಾದೇವಿ? ಜಗತ್ತನ್ನೆಲ್ಲಾ ಆಡಿಸುತ್ತಿರುವ ಪ್ರಭುವಲ್ಲವೇ ಅವನು!”
“ನಾವೂ ಶ್ರೀಶೈಲಕ್ಕೆ ಹೋಗೋಣ, ಅಪ್ಪ.” ಬೇಡುವಳು. “ಆಗಲಿ, ಗುರುಗಳು ಬರಲಿ, ಅವರಿಂದ ಎಲ್ಲವನ್ನೂ ಕೇಳಿಕೊಳ್ಳೋಣ. ಆಮೇಲೆ ನಾವು ಹೋಗೋಣ.” ಸಮಾಧಾನ ಮಾಡುವನು.
ಹೀಗೆ ದಿನಗಳು ಉರುಳಿದ್ದುವು. ಇಂದು ಶ್ರೀಶೈಲದಿಂದ ಗುರುಗಳು ಹಿಂದಿರುಗಿದ್ದಾರೆ. ಓಂಕಾರ, ಲಿಂಗಮ್ಮರಿಗೆ ಅವರ ಆಗಮನದ ವಾರ್ತೆಯಿಂದ ಆನಂದ ತುಂಬಿ ಬಂದಿದೆ. ಮಹಾದೇವಿಯ ಆನಂದವಂತೂ ಅದಕ್ಕಿಂತ ಮಿಗಿಲಾಗಿದ್ದಿತು.
ಆ ಎಳೆಯ ಹೃದಯದಲ್ಲಿ ಉಕ್ಕಿಬರುತ್ತಿದ್ದ ಭಾವನೆಗಳಿಗೆ ಕೊನೆಮೊದಲೇ ಇರಲಿಲ್ಲ. ಶ್ರೀಶೈಲದ ಮಲ್ಲಿಕಾರ್ಜುನನಿಂದ ತನಗಾಗಿಯೇ ಏನೋ ಒಂದು ದಿವ್ಯ ಸಂದೇಶವನ್ನು ತಂದಿರುವಂತೆ ಆಕೆಗೆ ಅನಿಸುತ್ತಿತ್ತು. ಅದಕ್ಕಾಗಿಯೇ ಗುರುಗಳು ಶ್ರೀಶೈಲಕ್ಕೆ ಹೋಗಿ ಬಂದಿರಬೇಕೆಂಬುದಾಗಿ ಊಹಿಸುವುದು ಆ ಹುಡುಗಿಯ ಮುಗ್ಧ ಮನಸ್ಸು.