೮
ಅಂದು ರಾತ್ರಿಯೇ ಲಿಂಗಮ್ಮ ಮೆಲ್ಲಗೆ ಪ್ರಾರಂಭಿಸಿದಳು.
``ಗುರುಗಳು ಏನು ಹೇಳಿದರು ಮಹಾದೇವಿ, ಇಷ್ಟು ಹೊತ್ತು ಅಲ್ಲಿ ಕುಳಿತಿದ್ದಿಯಲ್ಲ?”
``ಏನೂ ಅಲ್ಲ ಅವ್ವಾ, ನಾನೊಂದು ವಚನ ಬರೆದುಕೊಂಡು ಹೋಗಿದ್ದೆ. ಅವರ ಎದುರು ಓದಿದೆ, ಕೇಳಿ ಮೆಚ್ಚಿದರು.”
``ನೀನೂ ವಚನಗಳನ್ನು ಬರೆಯುತ್ತೀಯ?” ಆಶ್ಚರ್ಯವಿತ್ತು ಲಿಂಗಮ್ಮನ ಧ್ವನಿಯಲ್ಲಿ.
``ಒಂದೇ ಒಂದು ಬರೆದಿದ್ದೆ. ಗುರುಗಳು ಅಂದು ದೀಕ್ಷೆಯನ್ನು ಕೊಟ್ಟು ಕೆಲವು ಮಾತುಗಳನ್ನು ಹೇಳಿದ್ದರಲ್ಲ. ಅದನ್ನು ಪೂಜೆಯ ಸಮಯದಲ್ಲಿ ನೆನಸಿಕೊಂಡೆ. ಒಂದು ಸಣ್ಣ ವಚನ ಬರೆದೆ.”
``ಅದೆಲ್ಲವನ್ನೂ ಮಾಡು, ಮಹಾದೇವಿ. ಆದರೆ ಈ ಒಂದು ವಿಚಾರದಲ್ಲಿ ನಿನ್ನ ಅಭಿಪ್ರಾಯವನ್ನು ಈಗ ತಿಳಿಸಬೇಕು.” ಮುಖ್ಯ ವಿಷಯಕ್ಕೆ ಬಂದಳು ಲಿಂಗಮ್ಮ. ``ನಿನ್ನ ಮದುವೆ ಏರ್ಪಾಟನ್ನು ನಿನ್ನ ತಂದೆ ಮಾಡುತ್ತಿದ್ದಾರೆ. ಈ ಸಾರಿ ಅದಕ್ಕೆ ನೀನು ಒಪ್ಪಿಕೊಳ್ಳಲೇಬೇಕು.”
``ಇರಲಿ ಬಿಡವ್ವ, ಈಗಲೇ ಏನವಸರ ?” ಎಂದಿನಂತೆ ಸುಲಭವಾಗಿ ಇದರಿಂದ ಪಾರಾಗಲು ಯತ್ನಿಸಿದಳು ಮಹಾದೇವಿ.
ಹಿಂದೆಯೂ ಇಂತಹ ಮಾತು ಎಷ್ಟೋ ಸಾರಿ ಬಂದಿತ್ತು. `ಈಗಲೇ ಬೇಡ' `ಅಷ್ಟೇನು ಅವಸರ?' `ಆಲೋಚಿಸಿ ಹೇಳುತ್ತೇನೆ' ಎಂದು ಮುಂತಾಗಿ ತೇಲಿಸಿ ನುಡಿಯುತ್ತಿದ್ದಳು. ಮಗಳ ಮೇಲಿನ ಮಮತೆಯಿಂದ ಲಿಂಗಮ್ಮನಾಗಲೀ ಓಂಕಾರನಾಗಲೀ ಹೆಚ್ಚು ಒತ್ತಾಯ ಮಾಡಿ ಅವಳ ಮನಸ್ಸನ್ನು ನೋಯಿಸಲು ಇಚ್ಛಿಸಿರಲಿಲ್ಲ.
ಆದರೆ ಅವರ ಮನಸ್ಸಿನ ಕಾತರತೆ ಅವರಿಗೇ ಗೊತ್ತು. ಮಹಾದೇವಿಯ ರೂಪಸಂಪತ್ತು ದಿನದಿನಕ್ಕೆ ಹೊಸಲಾವಣ್ಯವನ್ನು ಪಡೆಯುತ್ತ ಕಾಂತಿಯುಕ್ತವಾಗುತ್ತಿತ್ತು. ಅದು ತಂದೆತಾಯಿಗಳಿಗೆ ಹೆಮ್ಮೆಯ ವಿಚಾರವೇ ಆದರೂ, ಆತಂಕಕಾರಿಯೂ ಆಗಿತ್ತು. ಲಿಂಗಮ್ಮ ಅವಳ ಸೌಂದರ್ಯಕ್ಕೆ ದೃಷ್ಟಿಯನ್ನು ತೆಗೆದು ಕಾಹನ್ನು ಕಟ್ಟುತ್ತಿದ್ದಳು.
`ಜಗಜ್ಜನನೀ' ಈ ಸೌಂದರ್ಯವು ಪವಿತ್ರವಾಗಿ ಉಳಿಯುವಂತೆ ಅನುಗ್ರಹಿಸು. ಇವಳಿಗೆ ಯೋಗ್ಯನಾದ ವರನನ್ನು ನೀನೇ ಕರುಣಿಸು. ಇವಳ