ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೦
ಕದಳಿಯ ಕರ್ಪೂರ

ಸೌಂದರ್ಯಕ್ಕೆ ಸಾರ್ಥಕತೆಯನ್ನೂ ರಕ್ಷಣೆಯನ್ನೂ ದಯಪಾಲಿಸು' ಎಂದು ಮನಸ್ಸಿನಲ್ಲಿಯೇ ಬೇಡುತ್ತಿದ್ದಳು.

ಆದರೆ ಮಗಳ ಮನೋಧರ್ಮ ಮದುವೆಯೆಂದರೆ ವಿಮುಖವಾಗುತ್ತಿತ್ತು. ಹಾಗೆಂದು ಅವರು ತಮ್ಮ ಕರ್ತವ್ಯವನ್ನು ಬಿಡುವಂತಿರಲಿಲ್ಲ. ಈಗ ಯಾವುದೋ ವರನನ್ನು ನೋಡಿ ನಿರ್ಧರಿಸಿದಂತಿತ್ತು. ಆದುದರಿಂದ ಲಿಂಗಮ್ಮ ಇಂದು ಅಷ್ಟು ಸುಲಭವಾಗಿ ಬಿಡುವ ಹಾಗಿರಲಿಲ್ಲ.

"ಇಲ್ಲ ಮಹಾದೇವಿ, ಈಗ ಹಾಗಾಗುವ ಹಾಗಿಲ್ಲ. ನೀನೇನೂ ಇನ್ನೂ ಸಣ್ಣವಳಲ್ಲ. ನಿನಗೇ ಗೊತ್ತಿದೆ. ನಾಲ್ಕು ಜನರಲ್ಲಿ ನಾವೀಗ ತಲೆಯೆತ್ತಿ ನಿಲ್ಲುವಂತಿಲ್ಲ. ಯಾವಾಗ ಕೇಳಿದರೂ ನೀನು ಹೀಗೇ ಹೇಳುತ್ತೀ. ಇಂದು ಸರಿಯಾದ ಉತ್ತರವನ್ನು ನೀನು ಕೊಡಲೇಬೇಕು" ನಿರ್ಧಾರದ ಧ್ವನಿಯಿತ್ತು ಲಿಂಗಮ್ಮನ ಮಾತಿನಲ್ಲಿ.

ಅವ್ವಾ, ನಿಜ ಹೇಳಬೇಕೆಂದರೆ ನಾನು ಮದುವೆಯನ್ನೇ ಆಗುವುದಿಲ್ಲ. ಗುರುಗಳೇ ನನ್ನ ಮದುವೆಯನ್ನು ಮಾಡಿಬಿಟ್ಟಿದ್ದಾರೆ. ನನ್ನ ಪತಿ ಚೆನ್ನಮಲ್ಲಿಕಾರ್ಜುನನೊಬ್ಬನೇ. ಇನ್ನಾರನ್ನೂ ನಾನು ಕಣ್ಣೆತ್ತಿಯೂ ನೋಡಲಾರೆ." ನಮ್ರವಾದರೂ ನಿರ್ಧಾರದ ಧ್ವನಿಯಲ್ಲಿ ಹೇಳಿದಳು ಮಹಾದೇವಿ

ಲಿಂಗಮ್ಮ ಅವಾಕ್ಕಾದಳು. ಆದರೂ ಅದನ್ನು ತೋರ್ಪಡಿಸಕೊಳ್ಳದೆ:

ಈ ಮಾತನ್ನು ಯಾರಾದರೂ ಕೇಳಿದರೆ ಹುಚ್ಚಿ ಎಂದಾರು. ಚೆನ್ನಮಲ್ಲಿಕಾರ್ಜುನ ಪತಿ ಎಂಬುದು ತತ್ತ್ವದೃಷ್ಟಿಯಲ್ಲಿ. ಅವನು ಎಲ್ಲರ ಪತಿಯೆಂದು ಗುರುಗಳು ಹೇಳುವುದಿಲ್ಲವೇ? ಅವನ ಒಡೆತನದ ಸಾನಿಧ್ಯದಲ್ಲಿ, ನಮ್ಮ ಲೌಕಿಕ ವ್ಯವಹಾರವನ್ನು ಅವನಿಗೇ ಅರ್ಪಿಸಿ, ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಅಲ್ಲವೇ ಮಗಳೇ! ಆ ದೃಷ್ಟಿಯಿಂದ ನೀನು ಮದುವೆಯಾಗಲೇಬೇಕು. ನಿನಗೆ ಯೋಗ್ಯವಾದ ಕಡೆಯಲ್ಲಿಯೇ ನೋಡುತ್ತೇವೆ. ನಿನ್ನ ಮನೋಧರ್ಮಕ್ಕೆ ಹೊಂದುವಂತಹ ಭಕ್ತನಿಗೇ ಕೊಟ್ಟು ನಿನ್ನನ್ನು ಮದುವೆಮಾಡುತ್ತೇನೆ. ಬನವಾಸಿಯಲ್ಲಿ ಒಂದು ಒಳ್ಳೆಯ ಮನೆತನದಲ್ಲಿಯೇ ನೋಡಿದ್ದಾರೆ. ಹುಡುಗ ತುಂಬಾ ಗುಣಾಢ್ಯನಂತೆ, ರೂಪವಂತನಂತೆ!... ಇನ್ನು ನಾಲ್ಕಾರು ದಿನಗಳಲ್ಲಿ ಆಷಾಢಮಾಸ ಮುಗಿಯುತ್ತದೆ. ಆಮೇಲೆ ನಿನ್ನನ್ನು ನೋಡಲು ಬರುತ್ತಾರೆ."

ತಾವು ಮಾಡಿರುವ ಏರ್ಪಾಡೆಲ್ಲವನ್ನೂ ತಡಬಡಿ ಇಲ್ಲದೆ ಹೇಳಿದಳು ಲಿಂಗಮ್ಮ. ಅಷ್ಟೇ ಅಸಹನೆಯಿಂದ ಹೇಳಿದಳು ಮಹಾದೇವಿ: