ಮನೋಧರ್ಮವನ್ನು ಅನುಸರಿಸಿದುದೇ ಹೆಚ್ಚೆಂದು ಹೇಳಬೇಕು. ಆದರೆ ನನಗೇನೋ ಅನ್ನಿಸುತ್ತದೆ, ಮಹಾದೇವಿ ಎಲ್ಲರಂತೆ ಮದುವೆಯಾಗಿ ಸಂಸಾರವನ್ನು ಮಾಡಲು ಬಂದವಳಲ್ಲ ಎಂಬುದಾಗಿ.
"ಹಾಗೆಂದು ಲೌಕಿಕವಾದ ಪ್ರಯತ್ನವನ್ನು ನೀವು ಬಿಡಿ ಎನ್ನಲಾರೆ. ಆ ಶಕ್ತಿ ಅದಾವ ರೂಪದಲ್ಲಿ ಈಕೆಯನ್ನು ತನ್ನ ಉದ್ದೇಶಸಾಧನೆಯ ಕೈದುವನ್ನಾಗಿ ಮಾಡಿಕೊಳ್ಳುತ್ತದೊ ಬಲ್ಲವರಾರು ? ನೀವು ಮಾಡುವ ಪ್ರಯತ್ನ ಮಾಡಿರಿ.” ಮಹಾದೇವಿಯು ಕೂಡ ಒಂದೆರಡು ಸಂದರ್ಭಗಳಲ್ಲಿ ಈ ವಿಚಾರವನ್ನು ಗುರುಗಳ ಬಳಿಯಲ್ಲಿ ಎತ್ತಿದ್ದಳು.
"ಗುರುಗಳೇ, ತಂದೆತಾಯಿಗಳು ನನ್ನ ಮದುವೆಯ ಪ್ರಯತ್ನದಲ್ಲಿದ್ದಾರೆ.”
"ಹೌದಮ್ಮ. ಅದು ಅವರು ಮಾಡಬೇಕಾದ ಕರ್ತವ್ಯ. ಅದರಲ್ಲಿಯೂ ಹೆಣ್ಣುಮಕ್ಕಳ ಮದುವೆಯನ್ನು ಆದಷ್ಟು ಜಾಗ್ರತೆ ಮುಗಿಸಿಬಿಡಬೇಕೆಂದು ತಂದೆ ತಾಯಿಗಳು ಕಾತುರರಾಗಿರುವುದು ಸಹಜ.” ಲೌಕಿಕ ದೃಷ್ಟಿಯಿಂದ ಹೇಳಿದ್ದರು ಗುರುಲಿಂಗರು.
ಅದೇಕೆ ಗುರುಗಳೇ, ಹೆಣ್ಣನ್ನು ಆ ಕಣ್ಣಿನಿಂದಲೇ ನೋಡುತ್ತದೆ ಈ ಜಗತ್ತು ?” ಅಸಹನೆಯಿಂದ ಕೇಳಿದಳು ಮಹಾದೇವಿ.
"ಅದು ಗಂಡಿನ ಸಂಕುಚಿತ ದೃಷ್ಟಿಯಿದ್ದರೂ ಇರಬಹುದು. ಅಲ್ಲದೆ ಹೆಣ್ಣಿನ ದೌರ್ಬಲ್ಯವೂ ಕಾರಣವೆಂದು ನನಗನ್ನಿಸುತ್ತದೆ. ತನ್ನ ಅಲಂಕಾರ ಒನಪು ಒಯ್ಯಾರಗಳಿಂದ ಗಂಡಿನ ಮನವನ್ನು ಸೆಳೆಯುವುದೇ ತನ್ನ ಸೌಂದರ್ಯದ ಸಾರ್ಥಕತೆ ಎಂದು ಹೆಣ್ಣು ತಿಳಿದಿರುವವರೆಗೂ ಅವಳಿಗೆ ಇದೇ ಸ್ಥಾನವೆಂದೇ ನನ್ನ ಭಾವನೆ.”
"ಆ ಸೌಂದರ್ಯವೆಲ್ಲವನ್ನೂ ಮಲ್ಲಿಕಾರ್ಜುನನಿಗೆ ಮೀಸಲಾಗಿಟ್ಟು ನಡೆಯುವ ಬ್ರಹ್ಮಚರ್ಯದ ಸಾಧನೆ ಹೆಣ್ಣಿಗೆ ಸಾಧ್ಯವಿಲ್ಲವೇ ಗುರುಗಳೇ ?” ತನ್ನ ಬಯಕೆಯನ್ನೇ ಪ್ರಶ್ನೆಯಾಗಿ ಕೇಳಿದಳು ಮಹಾದೇವಿ.
"ಸಾಧ್ಯ !” ಗುರುಗಳು ಗಂಭೀರವಾಗಿ ಹೇಳಿದರು. ``ಆದರೆ ಅಂತಹ ಸ್ತ್ರೀ ಇನ್ನೂ ಹುಟ್ಟಿಬರಬೇಕಾಗಿದೆ ತಾಯಿ. ಅದು ಬಹಳ ಕಠಿಣವಾದ ಮಾರ್ಗ. ಕೂದಲಿನ ಸೇತುವೆಯ ಮೇಲೆ ನಡೆದು ಬೆಂಕಿಯ ಪ್ರವಾಹವನ್ನು ದಾಟುವಂತಹ ಸಾಹಸಮಾರ್ಗ. ಆದರೆ ವಿವಾಹಿತ ಜೀವನದಲ್ಲಿದ್ದೂ ವಿಲಾಸಕ್ಕೆ ಒಳಗಾಗದೆ ಭಕ್ತಿಯನ್ನು ಸಾಧಿಸುವುದು, ಮನಸ್ಸು ಮಾಡಿದರೆ, ಸಾಮಾನ್ಯ ಚೇತನಗಳಿಗೂ ನಿಲುಕಬಹುದಾದ ಮಾರ್ಗ.”