ಪುಟ:Kadaliya Karpoora.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩

ಬೆಳೆಯುವ ಬೆಳಕು


``ಆದರೆ ನನ್ನ ಮಾರ್ಗ ಅದಲ್ಲವೆಂದೆನಿಸುತ್ತಿದೆ, ಗುರುಗಳೇ. ನನ್ನ ಅಂತರಂಗದಲ್ಲಿ ಯಾವುದೋ ಒಂದು ಕರೆ ಸದಾ ಮೊರೆಯುತ್ತಿದೆ. ನಾನು ಕಾಣದಿದ್ದರೂ ನಿಮ್ಮಿಂದ ಕೇಳಿ ಕಂಡಿರುವ ಶ್ರೀಶೈಲದ ಗಿರಿಶಿಖರಗಳು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿದೆ. ಕಲ್ಯಾಣದಿಂದ ಸುತ್ತುತ್ತಾ ಬಂದ ಬೆಳಕೊಂದು ನನ್ನ ಹೃದಯದಲ್ಲಿ ಲೀನವಾಗಿ ಅತ್ತ ನನ್ನನ್ನು ಎಳೆದೊಯ್ಯುತ್ತಿರುವಂತೆ ತೋರುತ್ತದೆ. ಕಣ್ಣುಮುಚ್ಚಿದರೆ ಸಾಕು, ಈ ಪ್ರಪಂಚವೆಲ್ಲಾ ಎತ್ತಲೋ ಜಾರಿ ನನಗೇನೋ ಹುಚ್ಚು ಹಿಡಿದಿದೆಯೋ ಅನ್ನಿಸುತ್ತದೆ ಒಮ್ಮೊಮ್ಮೆ.” - ತನ್ನ ಅಲೌಕಿಕ ಅನುಭವಗಳನ್ನು ಭಾವಾವೇಶದಿಂದ ಹೇಳಿದಳು ಮಹಾದೇವಿ.

``ನಿಜ ಮಗಳೇ ; ಇದು ಒಂದು ಹುಚ್ಚೇ. ಎಲ್ಲರೂ ಹುಚ್ಚರಾಗಿರುವಾಗ ಎಚ್ಚರವಾಗಿರುವುದೇ ಒಂದು ಹುಚ್ಚಾಗಿ ತೋರುತ್ತದೆ. ಆದರೆ ಆ ಎಚ್ಚರದ ಕರೆಯನ್ನು ಮರೆಯಬೇಡ. ಅದಕ್ಕೆ `ಓ'ಗೊಡು. ನಿನ್ನ ಮನೋಧರ್ಮವನ್ನು ನೀನು ಬಿಡಬೇಡ. ಸ್ವಧರ್ಮವೇ ಶ್ರೇಯಸ್ಕರ” ಎಂದು ಗುರುಲಿಂಗರು ಅವಳ ಆಕಾಂಕ್ಷೆಗೆ ಪ್ರಚೋದನೆಯನ್ನಿತ್ತಿದ್ದರು.

ಮಹಾದೇವಿಯ ಮನಸ್ಸಿಗೆ ಈಗ ಗುರುಗಳ ಆ ಮಾತು ಸುಳಿಯಿತು. ಅವಳ ಆಲೋಚನೆ ಮುಂದುವರೆಯಿತು :

``ನಿಜ, ಅದೇ ನನ್ನ ಸ್ವಧರ್ಮ. ಆದರೆ ಅದನ್ನು ಲೋಕಕ್ಕೆ ತಿಳಿಸುವುದು ಹೇಗೆ ? ಲೋಕದ ಮಾತು ಹಾಗಿರಲಿ, ತಂದೆತಾಯಿಗಳಿಗೆ ಮನದಟ್ಟು ಮಾಡಿ ಕೊಡುವುದು ಹೇಗೆ ? ಇರುವ ಒಬ್ಬಳೇ ಒಬ್ಬಳು ಮಗಳಿಂದ ಅವರು ಬಯಸಬಹುದಾದ ಸುಖದ ಕಲ್ಪನೆಯನ್ನು ನಾನು ಊಹಿಸಬಲ್ಲೆ. ಸಾಮಾನ್ಯಮಟ್ಟದ ಲೌಕಿಕ ವ್ಯವಹಾರಕ್ಕಿಂತ ಸ್ವಲ್ಪ ಹೆಚ್ಚಿನ ಎತ್ತರಕ್ಕೆ ಏರಬಲ್ಲ ಸಾಧನೆ ಅವರಿಗಿದೆ. ಆದರೆ ಈ ತ್ಯಾಗಕ್ಕೆ ಅವರು ಸಿದ್ಧರಾಗುವರೆ ?

``ಏನು ಹೇಳಿದಳು ತಾಯಿ ? ಹುಡುಗ ಗುಣಾಢ್ಯನಂತೆ ! ರೂಪವಂತನಂತೆ! ಹುಂ... ನನ್ನ ಹೃದಯದಲ್ಲಿ ಅಚ್ಚೊತ್ತಿರುವ ಅನಂತರೂಪವಂತನನ್ನು, ಅಪಾರವಾದ ಗುಣಸಾಗರನನ್ನು ನಮ್ಮವ್ವ ಹೇಗೆ ಅರಿಯಬಲ್ಲಳು. ರೂಪಿಲ್ಲದ ರೂಪದವನು ನನ್ನ ಪತಿ. ಎಡೆಯಿಲ್ಲದ, ಕಡೆಯಿಲ್ಲದ ಚೆಲುವ ಆತ”

ಎಂದು ತನ್ನ ಪತಿ ಚೆನ್ನಮಲ್ಲಿಕಾರ್ಜುನ ಸ್ವರೂಪವನ್ನು ಕುರಿತು ಅವಳ ಆಲೋಚನೆ ಹರಿಯಿತು. ಅವನ ಸ್ಪಷ್ಟ ರೂಪ ಎದುರಲ್ಲಿ ಕಟ್ಟಿ ನಿಂತಂತಾಗಿ ಒಂದು ವಚನ ಹೊರಬಿತ್ತು :