ಪುಟ:Kadaliya Karpoora.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫

ಬೆಳೆಯುವ ಬೆಳಕು

ನಂಬಿ ನಚ್ಚಿ ಮಾತಾಡಲಮ್ಮೆನವ್ವಾ.

ಚೆನ್ನ ಮಲ್ಲಿಕಾರ್ಜುನನಲ್ಲದ ಗಂಡನ ಉರದಲ್ಲಿ

ಮುಳ್ಳುಂಟೆಂದು ನಾನಪ್ಪಲಮ್ಮೆನವ್ವ.

ಹಿಂದೆ ಅನೇಕಸಾರಿ ಗುರುಲಿಂಗದೇವರ ಮಾತಿನಿಂದ ಪ್ರಚೋದನೆಗೊಂಡು ವಚನಗಳನ್ನು ಬರೆಯಲು ಪ್ರಯತ್ನಿಸಿದ್ದಳು. ಪ್ರಯತ್ನಪೂರ್ವಕವಾಗಿ ಕೆಲವನ್ನು ಬರೆದೂ ಇದ್ದಳು. ಆದರೆ ಅವು ಅಷ್ಟು ಶಕ್ತಿಯುತವಾಗಿರಲಿಲ್ಲ ; ಅವಳಿಗೇ ತೃಪ್ತಿಯನ್ನು ತಂದಿರಲಿಲ್ಲ. ಅಂತರಂಗದ ತಳಮಳದಿಂದ ಮೂಡಿಬರುತ್ತಿರುವ ಭಾವಗಳು ಭಾಷೆಯಲ್ಲಿ ಮೂಡಿಬರಬೇಕಾದರೆ ಅತಿ ತೀವ್ರತರವಾದ ಅನುಭವವದಿಂದ ಅಂತರಂಗ ಮಿಡಿಯಬೇಕೆಂಬುದನ್ನು ಕಂಡುಕೊಂಡಳು. ಅನುಭವದ ಆ ವೇಗ ಅತಿಶಯವಾಗಿ ಅದು ಅಂತರಂಗದಲ್ಲಿ ಮಥಿತವಾದಾಗ ಜೀವಂತ ಮಾತುಗಳು ನವನೀತದಂತೆ ಮೂಡಿಬರುತ್ತವೆ. ಹಾಗೆ ಮೂಡಿಬಂದಿದ್ದವು ಮಹಾದೇವಿಯ ವಚನಗಳು. ಅವುಗಳನ್ನು ಮತ್ತೆ ಮತ್ತೆ ಹೇಳಿದಂತೆಲ್ಲಾ ಅವಳ ಹೃದಯಲ್ಲೊಂದು ಹೊಸ ಕೆಚ್ಚು ಮೂಡಿದಂತಾಯಿತು. ಅವಳ ಆಧ್ಯಾತ್ಮಿಕ ಸಾಧನೆಗೊಂದು ಅವಲಂಬನೆ ಸಿಕ್ಕಂತಾಯಿತು. ತಾತ್ಕಾಲಿಕವಾಗಿ ಮನಸ್ಸು ಶಾಂತವಾಗಿ ನಿದ್ದೆಗೆ ಎಡೆಮಾಡಿಕೊಟ್ಟಿತು.

9

ಮಾರನೆಯ ದಿನವೆಲ್ಲಾ ಮಹಾದೇವಿ ಅನ್ಯಮನಸ್ಕಳಾಗಿಯೇ ಇದ್ದಳು. ಲಿಂಗಮ್ಮನೂ ಅವಳನ್ನು ಮಾತನಾಡಿಸುವುದಕ್ಕೆ ಹೋಗಲಿಲ್ಲ. ತನ್ನ ಮಾತು ಅವಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಮಾಡಿದೆ ಎಂಬುದನ್ನು ಮಾತ್ರ ಗಮನಿಸಿದಳು ಲಿಂಗಮ್ಮ.

ಇಂದು ಮಹಾದೇವಿಯ ಪೂಜೆ ಎಂದಿಗಿಂತ ದೀರ್ಘವಾಗಿತ್ತು. ತನ್ನ ದುಃಖವನ್ನೆಲ್ಲಾ ಚೆನ್ನಮಲ್ಲಿಕಾರ್ಜುನನ ಎದುರಿನಲ್ಲಿ ತೋಡಿಕೊಂಡಳು `ನಿನಗೊಲಿದ ನನ್ನನ್ನು ಇನ್ನೊಬ್ಬನಿಗೆ ಕೊಡಲು ತಂದೆತಾಯಿಗಳು ಹವಣಿಸುತ್ತಿದ್ದಾರೆ. ನನ್ನ ಅಂತರಂಗವನ್ನು ನೀನೇ ಬಲ್ಲೆ. ಈ ಸಂಕಟದಿಂದ ನನ್ನನ್ನು ಪಾರುಮಾಡಿ, ನಿನ್ನತ್ತ ಕರೆದುಕೊಳ್ಳುವ ಭಾರ ನಿನಗೇ ಸೇರಿದ್ದು' ಎಂಬ ಅವಳ ಮೊರೆ ಹೀಗೆ ಹೊರಹೊಮ್ಮಿತು :

ನಾನು ನಿನಗೊಲಿದೆ, ನೀನು ನನಗೊಲಿದೆ !

ನೀನೆನ್ನನಗಲದಿಪ್ಪೆ, ನಾನು ನಿನ್ನನಗಲದಿಪ್ಪೆನಯ್ಯ !