ಪುಟ:Kadaliya Karpoora.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭

ಬೆಳೆಯುವ ಬೆಳಕು

ಪಕ್ಕದಿಂದ ನಾಲ್ಕಾರು ಮಾರು ಆಚೆಯ ಬಯಲಿನಲ್ಲಿತ್ತು ಬಾವಿ. ರಸ್ತೆಯ ಇನ್ನೊಂದು ಪಕ್ಕದಲ್ಲಿ ವೇಗವಾಗಿ ನಡೆದು, ಅವರತ್ತ ದೃಷ್ಟಿಯನ್ನು ಹರಿಸದೆ, ದಾಟಿಹೋಗಬೇಕೆಂದು ಮಹಾದೇವಿ ಮುಂದುವರೆದಳು.

ಆದರೆ ಬಾವಿಕಟ್ಟೆಯ ಗುಂಪಿನಲ್ಲಿದ್ದ ಕೆಲವರು, ಮಹಾದೇವಿ ಮನೆಯಿಂದ ಹೊರಟಾಗಲೇ ಅವಳನ್ನು ಕಂಡಿದ್ದರು.

``ಅಲ್ಲಿ ನೋಡ್ರೀ ಬಂಗಾರಮ್ಮನವರೇ, ಮಹಾದೇವಿ !” ತೋರಿಸಿ ಹೇಳಿದಳು ಚೆಲುವಮ್ಮ. ಅವಳು ತೋರಿಸಿದ ರೀತಿ, ಹೇಳಿದ ಮಾತಿನಲ್ಲಿ ಇರುವ ಧ್ವನಿ ಅರ್ಥಗರ್ಭಿತವಾಗಿತ್ತು.

``ಎಲ್ಲಿಗೆ ಹೊರಟಳೋ !” ಕೇಳಿದಳು ಬಂಗಾರಮ್ಮ ಅತ್ತ ನೋಡುತ್ತ. ಹೆಸರು ಬಂಗಾರಮ್ಮನಾದರು ಅವಳ ಬಾಯಿ ಮತ್ತು ಕಿವಿ ಹಿತ್ತಾಳೆಯದಾಗಿತ್ತು.

``ಇನ್ನೆಲ್ಲಿಗೆ ? ಇರಬೇಕು ಮಠಕ್ಕೆ. ಅದೊಂದಿದೆಯಲ್ಲ ಅವಳಿಗೆ. ತಾನೇನು, ತನ್ನ ವಯಸ್ಸೇನು ! ಮಠವಂತೆ, ಮಠ !” ಮೊದಲೇ ಇದ್ದ ವ್ಯಂಗ್ಯದ ಜೊತೆಗೆ ತನ್ನ ನಂಜನ್ನು ಸೇರಿಸಿದಳು ನಂಜಮ್ಮ.

``ಯಾಕ್ರೀ ನಂಜಮ್ಮನವರೇ, ಮಹಾದೇವಿ ಮಠಕ್ಕೆ ಹೋದ್ರೆ ನಿಮಗ್ಯಾಕ್ರಿ ಇಷ್ಟು ಕೋಪ? ಏನೋ ಮೊದಲಿನಿಂದ ಅಲ್ಲಿಗೆ ಒಗ್ಗಿಕೊಂಡಿದ್ದಾಳೆ. ಇನ್ನೂ ಕಲಿಯಬೇಕು ಅಂತ ಆಸೆ.” ಮಹಾದೇವಿಯನ್ನು ಕುರಿತ ತಿರಸ್ಕಾರವನ್ನು ಕೇಳಲಾರದೆ ಹೇಳಿದಳು ಕಲ್ಯಾಣಮ್ಮ. ಮಹಾದೇವಿಯ ಮೇಲೆ ಆಕೆಗೆ ಅಭಿಮಾನ ಹೆಚ್ಚು.

``ಏನು ಕಲೀತಾಳೆ ? ಬೆಳೆದುನಿಂತ ಹೆಣ್ಣು, ಏನೋ ಕಲೀತಾಳಂತೆ, ಒಬ್ಬಳೇ ಮಠಕ್ಕೆ ಹೋಗಿ ! ಸಾಕು ಸುಮ್ಮನಿರ್ರೀ, ಕಲ್ಯಾಣಮ್ಮ. ಊರಿನ ಹುಡುಗೀರಲ್ಲಾ ಇದನ್ನೇ ಕಲ್ತಾರು.” ಸಿಡುಕಿದರು ನಂಜಮ್ಮ.

ಅಷ್ಟರಲ್ಲಿ ಬಂಗಾರಮ್ಮ ಹೇಳಿದಳು :

``ಅಲ್ಲಿ ನೋಡ್ರಿ, ತಲೆ ತಗ್ಗಿಸಿಕೊಂಡು, ರಸ್ತೆಯ ಆ ಪಕ್ಕದಲ್ಲಿ ಹೋಗುತ್ತಿದ್ದಾಳೆ ಇತ್ತ ನೋಡದೆ. ತಾಳಿ ಒಂದು ತಮಾಷೆ ಮಾಡೋಣ” ಎನ್ನುತ್ತಾ ಮಹಾದೇವಿಯನ್ನು ಕೂಗಿ ಕರೆದಳು.

``ಮಹಾದೇವಮ್ಮ... ಮಹಾದೇವಮ್ಮ.... ಏನಮ್ಮ ಕಾಣದ ಹಾಗೆ ಹೋಗುತ್ತಿದ್ದೀಯೆ? ಬಾ... ಚೆನ್ನಾಗಿದ್ದೀಯ ?”

ಅನಿವಾರ್ಯವಾಗಿ ಮಹಾದೇವಿ ತಲೆಯೆತ್ತಿ ಇತ್ತ ತಿರುಗಲೇಬೇಕಾಯಿತು. ತನ್ನ ಕ್ಷೇಮದ ವಿಚಾರವಾಗಿ ಅವಳಿಗೆ ಆಸಕ್ತಿ ಎಷ್ಟೆಂಬುದು ಮಹಾದೇವಿಗೆ