ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೫೯

ಚೆಲುವಾಗಿರಲಿಲ್ಲ. ಬಂಗಾರಮ್ಮನತ್ತ ನೋಡಿ, ಮಹಾದೇವಿಯನ್ನು ಕುರಿತು ಮತ್ತೆ ಚೆಲುವಮ್ಮನೇ ಮಾತನ್ನು ಎತ್ತಿಕೊಂಡಳು.

ಏನೋಮ್ಮ ನೀನಿನ್ನೂ ಚಿಕ್ಕವಳು ಅಂತ ತಿಳಿದಿದ್ದಿಯೇನೊ. ಈ ವಯಸ್ಸಿನಲ್ಲಿ ಹೀಗೆ ಬೀದಿ ಬೀದಿ ತಿರುಗುವುದು....

ಬಂಗಾರಮ್ಮ ಮಾತನ್ನು ಮುಂದುವರಿಸಿದಳು:

ಹೌದು, ಹೌದು ಅದೇನೋ ಸರಿ ಕಾಣುವುದಿಲ್ಲ. ಇಷ್ಟು ವಯಸ್ಸಾದರೂ ಮದುವೆಯಾಗದೆ ಇರುವುದು ಅಂದ್ರೇನ್ರೀ?

ಮತ್ತೆ ಚೆಲುವಮ್ಮನೇ ಮಾತನ್ನು ಎತ್ತಿಕೊಂಡಳು:

ಏನು ರೂಪಿಲ್ವೆ, ಲಾವಣ್ಯವಿಲ್ವೆ? ಆದರೂ ಹೀಗೆ ಇರುವುದು ಅಂದ್ರೆ ಆಶ್ಚರ್ಯವೆ!

ಹೌದು, ಹೌದು.... ಈ ವಯಸ್ಸಿಗೆ ನನಗಾಗಲೇ ಎರಡು ಮಕ್ಕಳಿದ್ದವು" ಬಂಗಾರಮ್ಮನೇ ಮತ್ತೆ ದನಿಗೂಡಿಸಿದಳು. ಮಹಾದೇವಿಗೆ ಮೈಯೆಲ್ಲಾ ಉರಿದೆದ್ದಿತು:

ಈಗ ಇರುವ ಎಂಟೋ ಹತ್ತೋ ಮಕ್ಕಳ ಜೊತೆಗೆ ಇನ್ನೂ ನಾಲ್ಕೋ ಆರೋ ಧಾರಳವಾಗಿ ಸೇರಿಸಿಕೊಳ್ಳಿ, ಬೇಡವೆನ್ನುವವರಾರು? ಆದರೆ ಇನ್ನೊಬ್ಬರ ಮನೆ ವಿಚಾರದಲ್ಲಿ ತಲೆಹಾಕಬೇಡಿ. ನೀವು ಹಡೆದ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಯೋಗ್ಯತೆ ಪಡೆಯಿರಿ, ಸಾಕು.

ಮೆಲ್ಲಗೆ ಆದರೂ ಕಟುವಾಗಿ ಹೇಳಿದಳು ಮಹಾದೇವಿ. ಸುತ್ತಲೂ ಇದ್ದ ಹೆಂಗಸರಿಂದ ನಗುವಿನ ಬುಗ್ಗೆ ಚಿಮ್ಮಿತು. ಇವರಿಬ್ಬರಿಗೂ ಇರುವ ಮಕ್ಕಳ ತಂಡವೂ ಅವರಿಗೆ ಗೊತ್ತಿತ್ತು. ಅವರ ಪುಂಡುತನವನ್ನು ಬಲ್ಲವರಾಗಿದ್ದರು.

ಬಂಗಾರಮ್ಮನ ಮುಖ ಇದ್ದಲಿಗಿಂತ ಕಡೆಯಾಯಿತು. ಚೆಲುವಮ್ಮನ ಮುಖದ ಚೆಲುವನ್ನಂತೂ ಆಗ ನೋಡಬೇಕಾಗಿತ್ತು. ಅವರ ಮನಸ್ಸಿನ ಕ್ಷುದ್ರತೆಯ ಕೆಸರೇ ಮೇಲೆದ್ದು ಬಂದು ಅವರ ಮುಖವನ್ನು ಮೆತ್ತಿದಂತಾಯಿತು. ಆದರೂ ಅದನ್ನು ಅಡಗಿಸಿಕೊಂಡು ಚೆಲುವಮ್ಮ ಹೇಳಿದಳು:

ನೋಡಿದಿರಾ ಬಂಗಾರಮ್ಮನವರೇ, ನಾವೇನೋ ಅವಳ ಒಳ್ಳೆಯದಕ್ಕೆ ಹೇಳಿದರೆ ನಮಗೇ ಹಾಸ್ಯ ಮಾಡುತ್ತಾಳೆ ಮಹಾದೇವಿ?

ಅಷ್ಟರಲ್ಲಿ ನಂಜಮ್ಮ ಹೇಳತೊಡಗಿದಳು. ಎಲ್ಲರಿಗಿಂತ ಸ್ವಲ್ಪ ಹೆಚ್ಚು ವಯಸ್ಸಾದವಳು ಆಕೆ: