ಪುಟ:Kadaliya Karpoora.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨

ಕದಳಿಯ ಕರ್ಪೂರ

ನಿಂದಿಸಿದವರೆನ್ನ ತಂದೆತಾಯಿಗಳೆಂಬೆ,

ಅಳಿಗೊಂಡವರು ಆಳ್ದರೆಂಬೆ,

ಜರಿದವರೆನ್ನ ಜನ್ಮಬಂಧುಗಳೆಂಬೆ,

ಕೊಂಡಾಡಿದವರೆನ್ನ ಹೊನ್ನ ಶೂಲದಲಿಕ್ಕಿದವರು

ಕೂಡಲ ಸಂಗಮದೇವ.

ಈ ಅರ್ಥದಲ್ಲಿ ನೋಡಿದಾಗ ಕೋಪಕ್ಕೆ ಅವಕಾಶವೇ ಇಲ್ಲ. ಇದೆಲ್ಲಾ ಸಹಜವಾದುದು ಮಾತ್ರವಲ್ಲ ಅವಶ್ಯಕವಾದುದೂ ಹೌದು. ನಮ್ಮನ್ನು ಸದಾ ಎಚ್ಚರದಿಂದಿಡುವ ಅವರ ಈ ಪ್ರಯತ್ನಕ್ಕೆ ನಾವೇ ಕೃತಜ್ಞರಾಗಿರಬೇಕು.

ಕಾಣದ ಠಾವಿಯಲ್ಲಿ ಜರಿದರೆ ಕೇಳಿ ಪರಿಣಾಮಿಸಬೇಕು.

ಅದೇನು ಕಾರಣ? ಕೊಳ್ಳದೆ ಕೊಡದೆ

ಅವರಿಗೆ ಸಂತೋಷವಹುದಾಗಿ ;

ಎನ್ನ ಮನದ ತದ್ವೇಷವಳಿದು, ನಿಮ್ಮ ಶರಣರಿಗೆ ಶರಣೆಂಬುದ

ಕರುಣಿಸು ಕೂಡಲಸಂಗಮದೇವ.

`ಎಂತಹ ಮಾತನ್ನು ಹೇಳಿದ್ದಾರೆ ಅಣ್ಣನವರು. ನಾವೇನೂ ಕೊಡದೆ, ಕೊಳ್ಳದೆ, ನಿಂದಕರು ನಮ್ಮಿಂದ ಸಂತೋಷಪಡುತ್ತಾರೆ. ಅದಕ್ಕೆ ನಾವು ಅವರನ್ನು ದ್ವೇಷಿಸುವುದೇಕೆ ?'

ಈ ನಿಲುವಿನಲ್ಲಿ ನಿಂತು ನೋಡಿದಾಗ ಬಾವಿಕಟ್ಟೆಯ ಹೆಂಗಸರ ಕುಹಕದ ಮಾತುಗಳು ಅವಳಿಗೆ ವಿನೋದವಾಗಿ ಕಂಡವು :

`ಛೆ ! ನಾನೇಕೆ ಅವರಿಗೆ ಹಾಗೆ ಕಠಿಣವಾದ ಮಾತನ್ನಾಡಿದೆ ! ಅವರ ಮನಸ್ಸು ನೊಂದಿತೋ ಏನೋ' ಎಂದುಕೊಂಡಳು.

10

ಮಠವನ್ನು ಪ್ರವೇಶಿಸಿದಾಗ ಗುರುಗಳು ಗದ್ದುಗೆಯ ಪಕ್ಕದಲ್ಲಿದ್ದ ತಮ್ಮ ವಸತಿಸ್ಥಾನದ, ಹೊಸ ಆವರಣದ ಜಗುಲಿಯ ಮೇಲೆ ಕುಳಿತಿದ್ದರು. ಕೈಯಲ್ಲಿ ಒಂದು ಓಲೆಗರಿಯ ಕಟ್ಟಿತ್ತು. ಮಹಾದೇವಿಯನ್ನು ಕಂಡು :

``ಬಾರಮ್ಮ... ಬಾ ಎನ್ನುತ್ತಾ ಓಲೆಗರಿಯ ಕಟ್ಟನ್ನು ಪಕ್ಕಕ್ಕೆ ಇಟ್ಟರು. ಮಹಾದೇವಿ ನಮಸ್ಕರಿಸಿ ಕುಳಿತುಕೊಂಡಳು. ಓಲೆಗರಿಯತ್ತ ನೋಡುತ್ತ :

``ಅದಾವುದು ಗುರುಗಳೇ, ಆ ಹೊತ್ತಗೆ ?