ಪುಟ:Kadaliya Karpoora.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩

ಬೆಳೆಯುವ ಬೆಳಕು

``ಅದೇ ಮೊನ್ನೆ ಹೇಳಿದೆನಲ್ಲಮ್ಮಾ, ಕಲ್ಯಾಣದ ಕಡೆಯಿಂದ ಜಂಗಮರು ಬಂದ ವಿಚಾರ. ಅವರು ಅಲ್ಲಿಂದ ತಂದ ವಚನಗಳ ಕಟ್ಟು ಇದು. ಬಸವಣ್ಣನವರ ವಚನಗಳಲ್ಲದೆ ಇತರ ವಚನಕಾರರ ವಚನಗಳೂ ಇವೆ. ಅಲ್ಲಮಪ್ರಭು ದೇವರ ವಚನಗಳು ಕೆಲವಿವೆ. ಅಬ್ಬಾ ! ಏನು ಅನುಭವಿಗಳಮ್ಮಾ ಅವರು ! ನನ್ನ ಅನುಭವ ಆ ಮಟ್ಟಕ್ಕೆ ಏರಲಾರದೆ ತಲ್ಲಣಿಸುತ್ತಿದೆ ತಾಯಿ. ಆದುದರಿಂದಲೇ ಬಸವೇಶ್ವರ ಅವರನ್ನು ಶೂನ್ಯಸಿಂಹಾಸನಕ್ಕೆ ಅಧಿಪತಿಗಳನ್ನಾಗಿ ಮಾಡಿದ್ದಾನೆ.

``ಶೂನ್ಯ ಸಿಂಹಾಸನ ! ಅದಾವುದು ಗುರುಗಳೆ ? ಹೆಸರಿನಿಂದ ಆಕರ್ಷಿತಳಾಗಿ ಕೇಳಿದಳು ಮಹಾದೇವಿ.

``ಈಗ ಕಲ್ಯಾಣದ ಮಹಾಕ್ಷೇತ್ರ ಬಹಳ ವಿಸ್ತಾರವಾಗಿದೆ, ಮಹಾದೇವಿ. ನಾನು ಹಿಂದೆ ಶ್ರೀಶೈಲದಿಂದ ಅಲ್ಲಿಗೆ ಹೋಗಿ ಬಂದಾಗ ಅದೇ ತಾನೆ ಅಣ್ಣನವರ ಕಾರ್ಯ ಪ್ರಾರಂಭವಾಗಿತ್ತು. ಇಂದದು ಬೆಳೆದು ಮಹಾವೃಕ್ಷವಾಗಿ ಬೇರು ಬಿಟ್ಟಿದೆ. ನೂರಾರಲ್ಲ, ಸಾವಿರಾರು ಸಾಧಕರು ಅದರ ನೆರಳಿನಲ್ಲಿ ಬಂದು ಸೇರಿದ್ದಾರಂತೆ! ಅಣ್ಣನವರು ಅಲ್ಲೊಂದು ಅನುಭವಮಂಟಪವನ್ನು ನಿರ್ಮಿಸಿದ್ದಾರೆ. ಅದರ ಅಧಿಪತಿಯಾಗಿ ಅಲ್ಲಮಪ್ರಭುಗಳು, ಅವರು ಕುಳಿತುಕೊಳ್ಳುವ ಅಧ್ಯಕ್ಷ ಪೀಠಕ್ಕೆ ಬಸವಣ್ಣ ಇಟ್ಟಿರುವ ಸಾಂಕೇತಿಕವಾದ ಹೆಸರು ಶೂನ್ಯ ಸಿಂಹಾಸನ ಎಂದು. ಅದನ್ನು ಏರಿದ ಆ ಮೂರ್ತಿ, ಶೂನ್ಯ ಮೂರ್ತಿಯೇ ! ಏನು ಅನುಭಾವ ಆತನದು ! ಏನು ವಚನಗಳಮ್ಮಾ ಆತನವು ! ನೋಡು ಒಂದೆರಡು ಮಾತ್ರ ಓದುತ್ತೇನೆ

ಎಂದು ಓಲೆಗರಿ ಕಟ್ಟನ್ನು ಕೈಗೆತ್ತಿಕೊಂಡರು. ಮಹಾದೇವಿ ಮೈಯೆಲ್ಲಾ ಕಿವಿಯಾಗಿ ಕುಳಿತಳು. ನಿಧಾನವಾಗಿ ಓದಿದರು ಗುರುಗಳು :

ಪ್ರಾಣಲಿಂಗಕ್ಕೆ ಕಾಯವೇ ಸಜ್ಜೆ,

ಆಕಾಶಗಂಗೆಯಲ್ಲಿ ಮಜ್ಜನ,

ಹೂವಿಲ್ಲದ ಪರಿಮಳದ ಪೂಜೆ

ಹೃದಯಕಮಲದಲ್ಲಿ ಶಿವಶಿವ ಎಂಬ ಶಬ್ದ

ಇದು ಅದ್ವೈತ ಕಾಣಾ ಗುಹೇಶ್ವರಾ.

ಮಹಾದೇವಿ ಕಣ್ಣುಮುಚ್ಚಿ ಆಲಿಸುತ್ತಿದ್ದಳು. ಶಬ್ದದ ಹಿಂದಿರುವ ಅರ್ಥದ ನಿಲವಿಗೆ ಏರುವ ಸಾಹಸ ಮುಖದಲ್ಲಿ ಕಾಣುತ್ತಿತ್ತು. ವಚನದ ವಾಚನ ಮುಗಿದ ಮೇಲೂ ಕ್ಷಣಕಾಲ ಹಾಗೇ ಇದ್ದಳು. ಅನಂತರ :