``ಹೂವಿಲ್ಲದ ಪರಿಮಳದ ಪೂಜೆ - ಎಂತಹ ಸುಂದರವಾದ ಮಾತು ! ಎಂಬ ಉದ್ಗಾರ ಹೊರಬಿತ್ತು ಅವಳಿಂದ.
``ಇದನ್ನು ಕೇಳಮ್ಮ" ಗುರುಗಳು ಮತ್ತೆ ಪ್ರಾರಂಭಿಸಿದರು :
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ,
ಮತ್ತೆ ದೇವರ ಪೂಜಿಸುವವರಾರೂ ಇಲ್ಲ ;
ಉತ್ತರಪಥದ ದರ್ಶನಾದಿಗಳಿಗೆ ಸುತ್ತಿದ ಮಾಯೆ,
ಎತ್ತಲಿಕೆ ಹೋಯಿತ್ತು ;
ಮರದೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ;
ಗುಹೇಶ್ವರನೆಂಬ ಲಿಂಗವಲ್ಲಿಯೇ ನಿಂದಿತ್ತು.
``ಅಬ್ಬಾ ! ಏನು ಮಾತುಗಳು ಗುರುಗಳೇ. ನನ್ನ ಕಣ್ಣು ಕೋರೈಸುತ್ತಿದೆ. ಅರ್ಥವನ್ನು ಕಾಣಲಾರದೆ ಕಣ್ಣು ಮುಚ್ಚುತ್ತಿದೆ.
``ನನ್ನದೂ ಅದೇ ಗತಿಯಾಗಿದೆಯಮ್ಮಾ.... ಎಂದು ಇನ್ನೊಂದು ಓಲೆಗರಿಯನ್ನು ನೋಡುತ್ತಾ : ``ಆ ನಿಲುವು ಹಾಗಿರಲಿ, ಇಲ್ಲಿ ನೋಡು, ಈ ಮಾತುಗಳನ್ನು ಎಷ್ಟು ಸುಂದರವಾಗಿ, ನೇರವಾಗಿ ಅಂತರಂಗಕ್ಕೆ ಇಳಿಯುವಂತೆ ಹೇಳಿದ್ದಾರೆ.
ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ !
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ !
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರಾ.
ಆಶೆಗೆ ಸತ್ತುದು ಕೋಟಿ ಕೋಟಿ.
ಆಮಿಷಕ್ಕೆ ಸತ್ತುದು ಕೋಟಿ ಕೋಟಿ.
ಹೊನ್ನಿಂಗೆ ಹೆಣ್ಣಿಂಗೆ ಮಣ್ಣಿಂಗೆ ಸತ್ತುದು ಕೋಟಿ ಕೋಟಿ,
ಗುಹೇಶ್ವರಾ ನಿನಗಾಗಿ ಸತ್ತವರನಾರನೂ ಕಾಣೆ.
ಇವುಗಳನ್ನು ಕೇಳುತ್ತಾ ಮಹಾದೇವಿಯ ಮನಸ್ಸು ಅಂತರ್ಮುಖವಾದಂತೆ ತೋರಿತು. ತನ್ನ ಸಮಸ್ಯೆಗಳ ಮೇಲೆ ಅಲ್ಲಮ ಬೆಳಕನ್ನು ಬೀರುತ್ತಿರುವಂತೆ ತೋರಿತು ಅವಳಿಗೆ.
``ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ - ಇದೇ ನನ್ನ ಮನಸ್ಸಿನಲ್ಲಿ ವೇದನೆಗೊಳಿಸುತ್ತಿದ್ದ ಭಾವ, ಗುರುಗಳೇ. ಅಲ್ಪಸುಖಕ್ಕಾಗಿ ಎಷ್ಟೊಂದು ಕಷ್ಟವನ್ನು ಎದುರಿಸುವುದಕ್ಕೆ ಸಿದ್ಧರಾಗುತ್ತೇವೆ. ಆ ಸುಖವೋ ಹೀಗೆ