"ಆಂ! ಏನು ಗುರುಪಾದಪ್ಪ!" ನಂಬಲಾಗದ ಆಶ್ಚರ್ಯದಿಂದ ಕೇಳಿದರು ಲಿಂಗಮ್ಮ-ಓಂಕಾರ.
"ಹೌದು ತಾಯಿ, ಈ ಮಾತು ನಿಜ. ಸ್ವತಃ ಗುರುಗಳೇ ನನ್ನೊಡನೆ ಹೇಳಿ ಕಳುಹಿಸಿದರು. ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ಬರುತ್ತಾರೆ. ನಿಜವಾಗಿಯೂ ನೀವು ಭಾಗ್ಯಶಾಲಿಗಳು.
ಗುರುಲಿಂಗದೇವರ ಸ್ವಭಾವವನ್ನು ಬಲ್ಲವರೆಲ್ಲರು ಗುರುಪಾದಪ್ಪನ ಮಾತನ್ನು ಒಪುತ್ತಿದ್ದರು. ಉಡುತಡಿಯ ಮಠಕ್ಕೆ ಅವರು ಬಂದಂದಿನಿಂದ ಆ ಮಠದ ಸ್ವರೂಪವೇ ಬದಲಾಗಿ ಹೋಗಿತ್ತು. ನಾಲ್ಕಾರು ಜನ ಶಿಕ್ಷಕರನ್ನಿಟ್ಟು ಮಠದ ಅವರಣದಲ್ಲಿಯೇ ಒಂದು 'ಅಯ್ಯಗಳ ಶಾಲೆ'ಯನ್ನು ಪ್ರಾರಂಭಿಸಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಅಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ಇದರ ಜೊತೆಗೆ ಪ್ರಸಾದ ಮಂದಿರದ ದಾಸೋಹವಂತೂ ಏಕಪ್ರಕಾರವಾಗಿ ನಡೆದೇ ಇತ್ತು.
ಸ್ವಾಮಿಗಳು ಆಗಾಧವಾದ ಪಂಡಿತರೂ ಆಗಿದ್ದರು. ಸಂಸ್ಕೃತ, ಕನ್ನಡಗಳಲ್ಲಿ ಅವರಿಗಿರುವ ವಿದ್ವತ್ತನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇರಲಿಲ್ಲ. ವಿದ್ವತ್ತಿನ ಜೊತೆಗೆ ಆಧ್ಯಾತ್ಮಿಕ ಜೀವನದ ಮಹಾಸಾಧನೆ ಅವರ ತೇಜಸ್ಸನ್ನು ಉಜ್ವಲಗೊಳಿಸಿತ್ತು; ಉಡುತಡಿಯ ಭಕ್ತಜನರ ವಿಶ್ವಾಸಗೌರವಗಳ ಕೇಂದ್ರವ್ಯಕ್ತಿಯಾಗಿ ಪರಿಣಮಿಸಿದ್ದರು.
ಆದರೆ ಮಠದ ಆವರಣದಿಂದ ಅವರು ಸಾಮಾನ್ಯವಾಗಿ ಹೊರಗೆ ಹೊರಡುತ್ತಿದ್ದುದೇ ಇಲ್ಲವೆನ್ನಬಹುದು. ಅನೇಕ ಭಕ್ತರಿಗೆ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ಪ್ರಸಾದವನ್ನಿತ್ತು ಸತ್ಕರಿಸಿ ಪುನೀತರಾಗಬೇಕೆಂಬ ಆಕಾಂಕ್ಷೆ. ಆದರೆ ಈ ಒಂದು ವಿಷಯದಲ್ಲಿ ಮಾತ್ರ ಯಾವ ಭಕ್ತರ ಮಾತನ್ನೂ ಅವರು ಕೇಳುತ್ತಿರಲಿಲ್ಲ. ಯಾರಾದರೂ ಬಂದು ತೀರಾ ಒತ್ತಾಯಮಾಡಿ ಕರೆದರೆ:
"ಒಮ್ಮೆ ಇದನ್ನು ಒಪ್ಪಿದೆನೆಂದರೆ, ಭಕ್ತರ ಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾ ಕುಳಿತುಕೊಳ್ಳುವುದೇ ನನ್ನಕೆಲಸವಾದೀತು" ಎಂದು ನಕ್ಕು ಆ ಮಾತನ್ನು ಹಾರಿಸಿಬಿಡುತ್ತಿದ್ದರು. ಮತ್ತು "ಪ್ರಸಾದವೆಂದರೆ ಏನು? ನೀವು ಭಕ್ತಿಯಿಂದ ಇಲ್ಲಿಗೆ ಬಂದು ನಮಸ್ಕರಿಸಿದಾಗಲೇ ಎಲ್ಲ ಪ್ರಸಾದವೂ ನನಗೆ ಅರ್ಪಿತವಾದಂತೆಯೇ ಆಯಿತು. ಇಷ್ಟರಿಂದಲೇ ನಿಮಗೆ ತೃಪ್ತಿಯಾಗದಿದ್ದರೆ ನೀವು ಮಾಡಿರುವುದರಲ್ಲಿ ಏನನ್ನಾದರೂ ತಂದು ಅರ್ಪಿಸಿರಿ; ಗುರುಲಿಂಗ ತೃಪ್ತನಾಗುತ್ತಾನೆ" ಎನ್ನುತ್ತಿದ್ದರು. ಹಾಗೆ ಭಕ್ತರು ವಿಶೇಷ ಸಂದರ್ಭಗಳಲ್ಲಿ ಉತ್ಸಾಹದಿಂದ ಏನನ್ನಾದರೂ ತಂದಾಗ ಅವರ ತೃಪ್ತಿಗಾಗಿ ಅದರಲ್ಲಿ ಒಂದು ಸ್ವಲ್ಪವನ್ನು ತೆಗೆದುಕೊಳ್ಳುತ್ತಿದ್ದುದೂ ಉಂಟು.