ಪುಟ:Kadaliya Karpoora.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨

ಕದಳಿಯ ಕರ್ಪೂರ

ಕಣ್ಣಿಗೆ ಬಿದ್ದಿತು ರಾಜನನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದ ಭದ್ರಗಜ. ಒಂದೇ ವಿನ್ಯಾಸಕ್ಕೆ ಅನುಗುಣವಾಗಿ ಅಂಬಾರಿಯು ಹಿಂದೆ ಮುಂದೆ ಓಲಾಡುತ್ತಿತ್ತು. ಸಂಭ್ರಮದಿಂದ ಜನಸಮುದ್ರದಲ್ಲಿ ತೆರೆಗಳೇಳುತ್ತಿದ್ದುವು.

ಆ ಜನಸಮುದ್ರದ ತೆರೆಗಳ ಮೇಲೆ ತೇಲುತ್ತಾ ಬರುತ್ತಿರುವಂತೆ ಕೌಶಿಕನ ಸಮಷ್ಟಿಮೂರ್ತಿ ಅಂಬಾರಿಯಂತೆಯೇ ಹಿಂದೆ ಮುಂದೆ ಓಲಾಡುತ್ತಾ ಬರುತ್ತಿತ್ತು. ಕಾವ್ಯಕ್ಕನುಗುಣವಾಗಿ ಮೂಡಿಬಂದ ಲಯಬದ್ಧವಾದ ಛಂದಸ್ಸಿನನಂತೆ, ರಾಜನ ಮತ್ತು ಅಂಬಾರಿಯ ಆ ಒಲೆದಾಟವು ಸುಂದರವಾಗಿ ಕಾಣುತ್ತಿತ್ತು.

ಗಂಭೀರವಾದ ರಾಜನ ಧೀರ ವ್ಯಕ್ತಿತ್ವ, ಅಂಬಾರಿಯಲ್ಲಿ ತುಂಬಿ ತುಳುಕುತ್ತಿತ್ತು. ರಾಜೋಚಿತವಾದ ಆಭರಣಗಳು ಜಾಜ್ವಲ್ಯಮಾನವಾಗಿ ಹೊಳೆಯುತ್ತಿದ್ದವು. ಯೌವನದ ಕ್ಷಾತ್ರ ತೇಜಸ್ಸು ಮುಖದಲ್ಲಿ ಹೊರಹೊಮ್ಮುತ್ತಾ ಜನಗಳಲ್ಲಿ ಗೌರವವನ್ನು ಹುಟ್ಟಿಸುವಂತಿತ್ತು.

ರಾಜ ತನ್ನ ಸಮೀಪಕ್ಕೆ ಬಂದಂತೆಲ್ಲಾ ಜನ ಚಪ್ಪಾಳೆ ತಟ್ಟುವರು. ನಮಸ್ಕರಿಸುವರು. ಜಯಘೋಷ ಮಾಡುವರು. ರಾಜನು ಅವುಗಳನ್ನು ಮುಗುಳುನಗೆಯಿಂದ ಸ್ವೀಕರಿಸುತ್ತಿದ್ದನು. ತಾನೂ ಪ್ರತಿಯಾಗಿ ನಮಸ್ಕರಿಸುತ್ತಿದ್ದನು. ಮಹಡಿಯ ಮೇಲೆ ನಿಂತ ಜನರನ್ನು ಸ್ವಲ್ಪ ತಲೆಯೆತ್ತಿ ನೋಡುವನು. ರಸ್ತೆಯ ಪಕ್ಕದಲ್ಲಿ ನಿಂತವರನ್ನು ತಲೆಬಾಗಿಸಿ ನೋಡುವನು. ತನ್ನ ಪ್ರಜೆಗಳ ವಿಶ್ವಾಸವನ್ನು ಸಾಧ್ಯವಾದಷ್ಟು ಮಟ್ಟಿಗೂ ಅವರಿಗೆ ತೃಪ್ತಿಯಾಗುವ ರೀತಿಯಲ್ಲಿ ಸ್ವೀಕರಿಸಲು ಪ್ರಯತ್ನಿಸುತ್ತಿದ್ದ.

ಮಹಾದೇವಿಯ ಮನೆಯ ಹತ್ತಿರ ಹತ್ತಿರ ಬರುತ್ತಿತ್ತು ರಾಜನೇರಿದ ಆನೆ. ಗೆಳತಿಯರೆಲ್ಲರೂ ಸಂಭ್ರಮದಿಂದ ಕುಣಿಯುತ್ತಿದ್ದರು.

``ಹಾ ! ಎಷ್ಟು ಚೆನ್ನಾಗಿದೆ ನೋಡೆ ಆ ಅಂಬಾರಿ ! ಹೇಗೆ ಥಳಥಳ ಹೊಳೆಯುತ್ತಿದೆ !

``ಅಷ್ಟೂ ಚಿನ್ನದ್ದೇ ಏನೋ, ಅಮ್ಮಾ.

``ಕಿರೀಟವನ್ನು ನೋಡೇ, ರತ್ನಗಳು ಹೇಗೆ ಹೊಳೆಯುತ್ತಿದೆ !

- ಇವೇ ಮುಂತಾದ ಉದ್ಗಾರಗಳು ಹೊರಬೀಳುತ್ತಿದ್ದವು.

ಮಹಾದೇವಿಯ ಕುತೂಹಲವು ಜಾಗ್ರತಗೊಂಡಿತ್ತು. ಕೌಶಿಕನ ಹೆಸರನ್ನು ಆಕೆ ಕೇಳಿದ್ದಳೇ ಹೊರತು ಇದುವರೆಗೂ ಅವನನ್ನು ಸರಿಯಾಗಿ ನೋಡಿರಲಿಲ್ಲ. ಹತ್ತಿರ ಹತ್ತಿರ ಬರುತ್ತಿದ್ದ ಆತನನ್ನೇ ತನ್ನ ಮುಗ್ಧನಯನಗಳಿಂದ ನೋಡುತ್ತಿದ್ದಳು.