ಪುಟ:Kadaliya Karpoora.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬರೆ

೭೭

``ಆಹಾ ! ಎಂತಹ ಅಪೂರ್ವ ಸೌಂದರ್ಯದ ಸಾಗರ ಅವಳು ! ಏನು ರೂಪು ! ಏನು ಲಾವಣ್ಯ ! ಬಟ್ಟ ದಾವರೆಯಂತಹ ಮುಖ ! ತುಂಬಿದ ಕೆನ್ನೆಗಳು ! ಕುಡಿಹುಬ್ಬು ! ಕಾಂತಿಯುಕ್ತವಾದ ವಿಶಾಲವಾದ ಕಣ್ಣುಗಳು, ತಿದ್ದಿ ಮಾಡಿದಂತಹ ನಾಸಿಕ, ಚಿಗುರಿನಂತಹ ಚೆಂದುಟಿಗಳು....

``ಓ ! ಓ ! ನಿಲ್ಲಿಸು... ಸಾಕು... ಸಾಕು.... ಪರಸ್ತ್ರೀಯರನ್ನು, ಅದರಲ್ಲೂ ಸಭ್ಯಗೃಹಸ್ಥನೊಬ್ಬನ ಮಗಳನ್ನು, ಹೀಗೆಲ್ಲಾ ವರ್ಣಿಸುವುದು ಕುಲೀನವಾದ ನಿನಗೆ ತರವಲ್ಲ. ನಗುತ್ತಾ ಹೇಳಿದ ವಸಂತಕ.

``ಆಕೆ ಪರಸ್ತ್ರೀಯಲ್ಲ ; ಪರಸ್ತ್ರೀಯಾಗಲು ನಾನು ಬಿಡುವುದಿಲ್ಲ. ಅವಳು ನನ್ನವಳಾಗುತ್ತಾಳೆ. ಧರ್ಮಸಮ್ಮತವಾಗಿ ವಿವಾಹವಾಗುತ್ತೇನೆ. ಪಟ್ಟ ಮಹಿಷಿಯನ್ನಾಗಿ ಮಾಡುತ್ತೇನೆ.

``ಇದೇನು ರಾಜೇಂದ್ರ ! ಇದು ಎಲ್ಲಿಯಾದರೂ ಸಾಧ್ಯವೇ ! ಅವರು ಶಿವ ಭಕ್ತರು, ಅದರಲ್ಲೂ ಮಹಾನಿಷ್ಠಾವಂತರು. ನಿನಗೆ ತಮ್ಮ ಮಗಳನ್ನು ಕೊಡುತ್ತಾರೆಯೇ ? ಹೀಗೆ ದುಡುಕಬೇಡ. ಎಚ್ಚರಿಸಿದ ವಸಂತಕ.

``ಅದೆಲ್ಲ ನನಗೆ ಬೇಕಿಲ್ಲ; ಅವಳು ನನ್ನವಳಾಗಲೇಬೇಕು. ಅದನ್ನು ಸಾಧಿಸಿ ಕೊಡುವ ಭಾರ ನನ್ನ ಸ್ನೇಹಿತನಾದ ನಿನಗೆ ಸೇರಿದ್ದು. ಅದಕ್ಕಾಗಿ ಯಾವ ತ್ಯಾಗಕ್ಕೂ ಬೇಕಾದರೂ ನಾನು ಸಿದ್ಧನಾಗಿದ್ದೇನೆ. - ನಿರ್ಧಾರದ ಧ್ವನಿಯಲ್ಲಿ ನುಡಿದ ಕೌಶಿಕ.

``ಒಳ್ಳೇ ಕೆಲಸವನ್ನೇ ಕೊಟ್ಟೆ. ನಗುತ್ತಾ ನುಡಿದರೂ ಮನಸ್ಸು ವಿಚಾರ ಪರವಾಗಿತ್ತು. ಓಂಕಾರಶೆಟ್ಟಿಯನ್ನು ಸ್ವಲ್ಪ ಮಟ್ಟಿಗೆ ಬಲ್ಲ ವಸಂತಕನಿಗೆ ಈ ಸಮಸ್ಯೆಯ ಅರಿವಾಗಿತ್ತು. ಆತ ಸುಲಭವಾಗಿ ಈ ಸಂಬಂಧವನ್ನು ಒಪ್ಪಿಕೊಳ್ಳುವವನಲ್ಲ ಎಂಬುದನ್ನು ಬಲ್ಲ. ಅದನ್ನು ಕೌಶಿಕನಿಗೂ ಹೇಳಿದ. ಈ ಪ್ರಶ್ನೆ ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲವೆಂದು ತಿಳಿಯಪಡಿಸಿ, ಇದನ್ನು ಅಷ್ಟಕ್ಕೇ ಬಿಟ್ಟು ಬಿಡುವಂತೆ ಮಾಡಲು ಪ್ರಯತ್ನಿಸಿದ. ಆದರೆ ಅದಾವುದಕ್ಕೂ ಕೌಶಿಕ ಕಿವಿಗೊಡುವಂತಿರಲಿಲ್ಲ.

``ಅದನ್ನೆಲ್ಲಾ ನನಗೆ ಹೇಳಬೇಡ. ಅಂತೂ ಅವರನ್ನು ಒಪ್ಪಿಸುವ ಭಾರ ನಿನಗೆ ಸೇರಿದ್ದು. ನಾಳೆಯೇ ಆಗಬೇಕು. ಅವರನ್ನೇ ಬರಮಾಡಿಕೋ. ಅಥವಾ ಪರಿವಾರದೊಡನೆ ನೀನೇ ಅವರ ಮನೆಗೆ ಹೋಗು. ದುಡ್ಡಿನ ಆಶೆ, ರಾಜ್ಯದ ಆಶೆ, ಅದಾವುದೂ ಅಸಾಧ್ಯವಾದರೆ ಕೊನೆಗೆ ದಂಡನೆಯ ಬೆದರಿಕೆ, ಯಾವುದೋ - ಅಂತೂ ನನ್ನ ಕೆಲಸ ನೆರವೇರಬೇಕು.