ಪುಟ:Kadaliya Karpoora.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮

ಕದಳಿಯ ಕರ್ಪೂರ

``ಇದಾವುದಕ್ಕೂ ಅವರು ಮಣಿಯಲಾರರು. ಏಕೈಕ ನಿಷ್ಠಾವಂತರೆಂದು ಹೆಸರಾಂತವರು ಆ ದಂಪತಿಗಳು. ಅವರಿಗೆ ತಕ್ಕ ಮಗಳು ಆಕೆ. ಆದುದರಿಂದ ಬಹಳ ಉಪಾಯವಾಗಿ ಕೆಲಸ ಸಾಧಿಸಬೇಕು.

``ಅದಕ್ಕೇ ಆ ಭಾರವನ್ನೆಲ್ಲಾ ನಿನಗೆ ವಹಿಸುವುದು. ನಾಳೆಯೇ ಇದರ ಇತ್ಯರ್ಥವಾಗಬೇಕು. ಅದಕ್ಕೆ ಅಗತ್ಯವಾದ ಎಲ್ಲ ಅಧಿಕಾರವನ್ನೂ ನೀನು ಬಳಸಿಕೊಳ್ಳಬಹುದು. ಈ ವಿಚಾರವನ್ನು ಮಂತ್ರಿಗಳಿಗೂ ತಿಳಿಸು. ನಾನೂ ಕರೆಸಿ ಹೇಳುತ್ತೇನೆ.

``ಇದರಲ್ಲಿ ಅಧಿಕಾರವೇನು ಬಂತು ? ಬಹಳ ದೊಡ್ಡ ಜವಾಬ್ದಾರಿಯನ್ನೇ ನನ್ನ ತಲೆಯ ಮೇಲೆ ಹಾಕಿದ್ದೀಯ. ಭಕ್ತರನ್ನು ಕೆಣಕುವ ಮಹಾಸಾಹಸಕ್ಕೆ ನನ್ನನ್ನು ತಳ್ಳುತ್ತಿದ್ದೀಯ. - ಈ ಕಾರ್ಯದ ಆಗುಹೋಗುಗಳನ್ನು ಆಲೋಚಿಸುತ್ತಾ ಹೇಳಿದ ವಸಂತಕ.

``ನನಗಾಗಿ ಅದನ್ನು ನೀನು ಮಾಡಲೇಬೇಕು ವಸಂತಕ. ಬೇಡಿಕೆಯ ಧ್ವನಿಯಿತ್ತು ಕೌಶಿಕನ ಮಾತಿನಲ್ಲಿ.

``ಆಗಲಿ, ನನ್ನ ಸರ್ವಪ್ರಯತ್ನವನ್ನೂ ಅದಕ್ಕಾಗಿ ಮಾಡುತ್ತೇನೆ. ಮಂತ್ರಿಗಳೊಡನೆಯೂ ಆಲೋಚಿಸಿ ಕಾರ್ಯಕ್ಕೆ ತೊಡಗುತ್ತೇನೆ. ನೀನು ನಿಶ್ಚಿಂತೆಯಿಂದ ಇರು.

``ನಿಶ್ಚಿಂತೆ ! ಅದು ನಿನ್ನ ಕಾರ್ಯಸಂಧಾನದ ಸಫಲತೆಯನಂತರ ಮಾತ್ರವೇ ಲಭಿಸಬಲ್ಲದು. ಅದಾವ ಬಂಧನವೋ, ಅವಳ ದರ್ಶನಮಾತ್ರದಿಂದ ನನ್ನ ಮನಸ್ಸು ಅಷ್ಟು ಕಲಕಿಹೋಗಿದೆ.

ಇಬ್ಬರೂ ಎದ್ದು ಅರಮನೆಯನ್ನು ಹೊಕ್ಕರು. ನಾಳಿನ ಕಾರ್ಯಭಾರದ ಹೊರೆಯನ್ನೇ ಚಿಂತಿಸುತ್ತಾ ವಸಂತಕ ಬೀಳ್ಕೊಂಡ.

3

ಇತ್ತ ಮಹಾದೇವಿ ಕೌಶಿಕನ ನೆಟ್ಟನೋಟವನ್ನು ಕಿತ್ತೆಸೆದು ಒಳ ಹೊಕ್ಕ ಮೇಲೆ ಅವನ ಭಾವನೆಗಳ ಓಟ ಅನೇಕ ಬಗೆಯಾಗಿ ಓಡುತ್ತಿತ್ತು.

`ರಾಜ, ತನ್ನ ಪ್ರಜೆಗಳನ್ನು ನೋಡಿದರೆ ತಪ್ಪೆ ? ನಾನೇಕೆ ಹಾಗೆ ಒಳಗೆ ಓಡಿ ಬಂದೆ ?' ಎಂದುಕೊಳ್ಳುವಳು ಒಮ್ಮೆ. ಆದರೆ ಮತ್ತೊಮ್ಮೆ :

`ಇಲ್ಲ... ಆ ನೋಟದ ಹಿಂದೆ ಪ್ರಜಾವಾತ್ಸಲ್ಯದ ರಾಜದೃಷ್ಟಿಗಿಂತ ಬೇರೆಯಾದ ಭಾವನೆಯೊಂದು ಉಕ್ಕಿ ಹರಿದು ನನ್ನನ್ನು ಇರಿಯುವಂತಿರಲಿಲ್ಲವೇ ? ಅದನ್ನು