ನೆನ್ನೆಯ ದಿನ ಉತ್ಸವದ ಸಮಯದಲ್ಲಿ ನಿಮ್ಮ ಕುಮಾರಿಯನ್ನು ನೋಡಿ, ಅವಳ ಸೌಂದರ್ಯಕ್ಕೆ ಮನಸೋತಿದ್ದಾರೆ ರಾಜರು. ಅವಳನ್ನು ಮದುವೆಯಾಗಬೇಕೆಂದು ಅಪೇಕ್ಷೆಪಟ್ಟಿದ್ದಾರೆ. ನಿಮ್ಮ ಮಗಳು ಮಹಾರಾಜರ ಪಟ್ಟಮಹಿಷಿಯಾಗಿ....
``ನಿಲ್ಲಿಸಿರಿ ಸಾಕು, ಮುಂದೆ ಹೇಳಬೇಡಿರಿ, ಅಸಹನೆಯಿಂದ ತಡೆದ ಓಂಕಾರ.
``ಇದೇನು ಓಂಕಾರಶೆಟ್ಟರೇ ? ಬಹುಶಃ ಇದನ್ನು ಊಹಿಸಿದ್ದರೂ ಆಶ್ಚರ್ಯಗೊಂಡವನಂತೆ ಕೇಳಿದ ವಸಂತಕ.
``ಇನ್ನೇನು ? ಆಗಲೇ ಮದುವೆ ನಿರ್ಧಾರವಾದಂತೆ ದುಡುಕಿ ಮಾತನಾಡುತ್ತಿದ್ದೀರಿ!
``ಮಹಾರಾಜರೇ ನಿಮ್ಮ ಬಳಿಯಲ್ಲಿ ಕನ್ಯಾರ್ಥಿಯಾಗಿ ಬಂದಿರುವಾಗ ಅದನ್ನು ತಿರಸ್ಕರಿಸುವುದು ಯುಕ್ತವಲ್ಲ, ಶೆಟ್ಟರೇ. ಅವಿವಾಹಿತನಾದ ರಾಜಕುಮಾರ ಧರ್ಮಸಮ್ಮತವಾಗಿ ನಿಮ್ಮ ಮಗಳನ್ನು ಕೈಹಿಡಿಯಬೇಕೆಂದು ಅಪೇಕ್ಷೆಪಟ್ಟರೆ ಅದನ್ನು ನೀವು ತಳ್ಳಿ ಹಾಕುತ್ತೀರೆಂದು ನಾವಾರು ತಿಳಿದಿಲ್ಲ.
``ನೀವು ಏನು ತಿಳಿದಿದ್ದೀರೋ ನನಗೆ ಗೊತ್ತಿಲ್ಲ. ಆದರೆ ಈ ಸಂಬಂಧ ಸಾಧ್ಯವಿಲ್ಲವೆಂದು ಮಾತ್ರ ನಿಮ್ಮ ರಾಜರ ಬಳಿಯಲ್ಲಿ ನಿವೇದಿಸಿಕೊಳ್ಳುತ್ತಿರುವೆನೆಂದು ಹೇಳಿರಿ. ಏಕೈಕನಿಷ್ಠಾವಂತರಾದ ಶಿವಭಕ್ತರ ಮನೆಯ ಹೆಣ್ಣನ್ನು ನಿಮ್ಮ ರಾಜರು ಬಯಸುವುದು ಬೇಡವೆಂದು ತಿಳಿಸಿರಿ. ನಿರ್ಧಾರದಿಂದ ಹೇಳಿದ ಓಂಕಾರ.
ವಸಂತಕ ಇಷ್ಟಕ್ಕೇ ಸುಮ್ಮನಾಗಲು ಬಂದರಲಿಲ್ಲ :
``ನೀವು ಹೇಳುವುದು ಬುದ್ಧಿವಂತಿಕೆಯ ಮಾತಲ್ಲ, ಶೆಟ್ಟರೇ. ನಿಮ್ಮ ಭಕ್ತಿ ನಿಷ್ಠೆಗೆ ಇದರಿಂದ ಕುಂದೇನಾದರೂ ಒದಗುತ್ತದೆಯೇ ಆಲೋಚಿಸಿರಿ. ಅದಕ್ಕೆ ಇನ್ನೂ ಹೆಚ್ಚಿನ ಸಹಾಯವೇ ಆಗಬಹುದು. ಇಡೀ ಒಂದು ರಾಜ್ಯದ ಒಡೆಯನೇ ನಿಮ್ಮವನಾಗುತ್ತಾನೆ. ನಿಮ್ಮ ಘನತೆಗೌರವಗಳು ಹೆಚ್ಚುತ್ತವೆ. `ಆಮಿಷವನ್ನು ತೋರಿಸಿದ ವಸಂತಕ.
ಆದರೆ ಓಂಕಾರ ಈ ಪ್ರಲೋಭನೆಗಳಿಗೆ ಒಳಗಾಗುವವನಾಗಿರಲಿಲ್ಲ :
``ಇಲ್ಲ ಸ್ವಾಮಿ, ದಯವಿಟ್ಟು ಕ್ಷಮಿಸಿರಿ. ನಮಗೆ ಆ ಘನತೆಯೂ ಬೇಡ, ಗೌರವವೂ ಬೇಡ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ.
``ನಿಮಗೆ ಆ ಗೌರವ ಬೇಡದೆ ಇರಬಹುದು. ನಿಮ್ಮ ಮಗಳ ಸುಖಕ್ಕಾಗಿಯಾದರೂ ಒಪ್ಪಿಕೊಳ್ಳಿ. ಮಹಾದೇವಿಯ ಸುಖವನ್ನೇ ತನ್ನ ಗುರಿಯಾಗಿಟ್ಟುಕೊಂಡವನಂತೆ ಹೇಳಿದ.