ಪುಟ:Kadaliya Karpoora.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೮೩

``ಸಾಕು ಬಾಯಿ ಮುಚ್ಚಿರಿ. ಬಂದ ಅತಿಥಿಗಳೆಂದು ಗೌರವವನ್ನು ಕೊಟ್ಟರೆ ನಿಮ್ಮ ಮಾತು ಹದ್ದನ್ನು ಮೀರುತ್ತಿದೆ. ಧ್ವನಿ ಗಡುಸಾಗಿತ್ತು.

ವಸಂತಕನಿಗೂ ಸ್ವಲ್ಪ ಸಿಟ್ಟು ಬಂದಂತೆ ತೋರಿತು. ಅದಕ್ಕೆ ಸಂವಾದಿಯಾದ ಧ್ವನಿಯಲ್ಲಿಯೇ ಆತನು ಹೇಳಿದ :

``ಇಲ್ಲಿ ಕೇಳಿ, ಶೆಟ್ಟರೇ... ನಾನು ಬಂದದ್ದು ನಿಮ್ಮ ಮನೆಯ ಆತಿಥ್ಯವನ್ನು ಸ್ವೀಕರಿಸಲಿಕ್ಕಲ್ಲ. ರಾಜನ ಪ್ರತಿನಿಧಿಯಾಗಿ ನಿಮ್ಮ ಬಳಿಗೆ ಬಂದಿದ್ದೇನೆ. ಒಳ್ಳೆಯ ಮಾತಿನಿಂದ ನಿಮ್ಮ ಮಗಳನ್ನು ರಾಜರಿಗೆ ಕೊಡಲು ಒಪ್ಪಿದರೆ ಸರಿ... ಇಲ್ಲವಾದರೆ...

ಓಂಕಾರನಿಗೆ ಮೈಯಲ್ಲಾ ಉರಿದಂತಾಯಿತು. ಅವನ ಸಾತ್ವಿಕ ಸತ್ವಶಕ್ತಿಯ ಹಿಂದಿದ್ದ ಕೋಪ ಸಿಡಿದೆದ್ದಿತು. ಆದರೂ ಅದನ್ನು ಕಷ್ಟದಿಂದ ಸಂಯಮಿಸಿಕೊಂಡು:

``ಇಲ್ಲವಾದರೆ.... ಹೂಂ.... ಅದನ್ನೂ ಹೇಳಿಬಿಡಿ....

``ರಾಜರು ನಿಮಗೆ ಬುದ್ಧಿ ಕಲಿಸುತ್ತಾರೆ ! ಮಾತನ್ನು ಮುಗಿಸಿದ ವಸಂತಕ.

ಈ ಮಾತನ್ನು ವ್ಯಂಗ್ಯ ತಿರಸ್ಕಾರದಿಂದ ಹೇಳಿದ ಓಂಕಾರ :

``ಕಣ್ಣಿಗೆ ಬಿದ್ದ ಹೆಣ್ಣುಗಳೆಲ್ಲಾ ಬೇಕೆಂಬ ರಾಜ, ಅದಕ್ಕೆ ಮಧ್ಯಸ್ತಿಕೆ ವಹಿಸಿ ಹೊರಡುವ ನಿನ್ನಂತಹ ಗೆಳೆಯ, ಇವರಿಂದ ನಾನು ಬುದ್ಧ ಕಲಿಯಬೇಕಾಗಿಲ್ಲ. ನಿನಗೆ ಬುದ್ಧಿಯೇನಾದರೂ ಇದ್ದರೆ ನಿನ್ನ ರಾಜನಿಗೆ ಹೇಳು ಹೋಗು.

ವಸಂತಕನಿಗೆ ಮುಖದ ಮೇಲೆ ಹೊಡೆದಂತಾಯಿತು. ತಾನು ದುಡುಕಿದುದು ಒಳಿತಾಗಲಿಲ್ಲವೆಂದು ಅನ್ನಿಸಿತು. ಆದರೂ ಆಡಿದ ಮಾತಿನಿಂದ ಹಿಂದೆ ಹೋಗಲು ಇಚ್ಛಿಸದೆ ಮತ್ತೆ ಹೇಳಿದ :

``ನೋಡಿ, ಚೆನ್ನಾಗಿ ಆಲೋಚಿಸಿರಿ. ರಾಜನ ವೈರತ್ವವನ್ನು ಕಟ್ಟಿಕೊಳ್ಳುತ್ತಿದ್ದೀರಿ."

``ಹೇಳುವುದು ಮುಗಿದಿದ್ದರೆ ಹೊರಡಬಹುದು. ಇನ್ನು ಉಳಿದುದನ್ನು ನೀವು ಹೇಳಿದಂತೆ ನಮ್ಮ ಆಲೋಚನೆಗೆ ಬಿಡಿ. ಮಾತು ಬೆಳೆಸಲು ಇಷ್ಟವಿಲ್ಲದೆ ತಿರಸ್ಕಾರದಿಂದ ಹೇಳಿದ ಓಂಕಾರ.

``ಆಗಲಿ... ಹಾಗೆಯೇ ಆಗಲಿ... ಚೆನ್ನಾಗಿ ಆಲೋಚಿಸಿರಿ. ಅದರ ಮುಂಗಾಣಿಕೆಗಳೆಂಬಂತೆ ರಾಜರು ಕಳುಹಿಸಿರುವ ಈ ಉಪಾಯನಗಳನ್ನು ಸ್ವೀಕರಿಸಿ ಎಂದು ಅಂತಃಪುರದ ಸ್ತ್ರೀಯರತ್ತ ನೋಡಿದ. ಅವರ ಕೈಯಲ್ಲಿದ್ದ ಹರಿವಾಣಗಳನ್ನು ಕೆಳಗಿಡಲು ಬಾಗಿದರು. ಅಷ್ಟರಲ್ಲಿ ಗುಡುಗಿದ :

``ಕೂಡದು, ಅವು ಈ ಮನೆಯ ನೆಲವನ್ನು ಸೋಂಕಕೂಡದು. ಬೆಚ್ಚಿಬಿದ್ದು ಸ್ತ್ರೀಯರು ಹಿಂದಕ್ಕೆ ಸರಿದು ನಿಂತರು. ಮತ್ತೆ ಓಂಕಾರ :

``ನಿಮ್ಮ ಕಾಣಿಕೆ ನಿಮ್ಮ ಬಳಿಯಲ್ಲೇ ಇರಲಿ ; ಅದು ನಮಗೆ ಅಗತ್ಯವಿಲ್ಲ.