ಪುಟ:Kadaliya Karpoora.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೮೫

ಕಂಡಾಗಲೇ" ಹೇಳಿದಳು ಶಂಕರಿ. ಮಹಾದೇವಿ ಮಾತನ್ನೇನೂ ಆಡದೇ ಮೌನವಾಗಿ ನಡೆಯುತ್ತಿದ್ದಳು. ಮತ್ತೆ ಶಂಕರಿಯೇ ಕೇಳಿದಳು :

``ನಿಜ ಹೇಳು, ಮಹಾದೇವಿ, ನಿನ್ನ ಮನಸ್ಸಿಗೆ ಏನು ಅನಿಸುತ್ತದೆ ?

``ಅಂದರೆ ?... ರಾಜನ ಸಂಬಂಧ ನಿನಗೆ.... ಪೂರ್ಣವಾಗಿ ಹೇಳುವ ಅವಶ್ಯಕತೆ ಉಳಿಯಲಿಲ್ಲ.

``ಇದೇನು ಶಂಕರಿ ಹೀಗೆ ಕೇಳುತ್ತೀ ? ಎಲ್ಲಿಯಾದರೂ ಉಂಟೇನೇ ? ಕನಸಿನಲ್ಲಿಯೂ ನಾನು ಊಹಿಸಲಾರೆ, ಆತನನ್ನು ಮದುವೆಯಾಗುವುದನ್ನು ನಿರ್ಧಾರದ ಧ್ವನಿಯಿತ್ತು ಮಹಾದೇವಿಯ ಮಾತನಲ್ಲಿ.

``ಆದರೆ... ಮೊದಲೇ ರಾಜ, ಮೇಲಾಗಿ ಯುವಕ. ಹೇಳುವವರು, ಕೇಳುವವರು ಯಾರೂ ಇಲ್ಲ. ಸುಲಭವಾಗಿ ತನ್ನ ನಿರ್ಧಾರವನ್ನು ಬಿಡಲಾರ. ನಿನ್ನ ತಂದೆತಾಯಿಗಳನ್ನು ಹಿಂಸಿಸುತ್ತಾನೋ ಏನೋ.

``ಅದೇ ವ್ಯಥೆಯೇ ನನ್ನನ್ನು ದುಃಖದಿಂದ ಅಲುಗಿಸುತ್ತಿದೆ, ಶಂಕರಿ. ನನಗಾಗಿ ನನ್ನ ತಂದೆತಾಯಿಗಳು ಏನೆಲ್ಲ ಅನುಭವಿಸಬೇಕಾಗಿದೆಯೋ. ಇದರಿಂದ ಅವರನ್ನು ಹೇಗೆ ಪಾರು ಮಾಡಲಿ ಎಂಬುದೇ ನನ್ನ ಯೋಚನೆ. ನನಗೆ ಬರುವಂತಹ ಸಂಕಟಗಳನ್ನು ನಾನು ಎದುರಿಸಬಲ್ಲೆ ; ನನಗಾಗಿ ಅವರು ಸಂಕಟಪಡುವುದನ್ನು ನಾನು ನೋಡಲಾರೆ.... ಆದರೆ ನಾನೇನನ್ನು ತಾನೇ ಮಾಡುವುದಕ್ಕೆ ಸಾಧ್ಯ? ಅದನ್ನೇ ಯೋಚಿಸುತ್ತಿದ್ದೇನೆ. ಗುರುಗಳು ಏನು ಹೇಳುತ್ತಾರೋ ಎಂದು ಮನಸ್ಸು ಹಾತೊರೆಯುತ್ತಿದೆ.

ಮಾತನಾಡುತ್ತಾ ದಾರಿ ನಡೆಯುತ್ತಿದ್ದರು. ನಡೆದ ವಿಷಯ ಮಿಂಚಿನ ವೇಗದಲ್ಲಿ ಊರಿನಲ್ಲಿ ಹಬ್ಬುತ್ತಿತ್ತು. ದಾಕ್ಷಾಯಿಣಿಯ ಕಿವಿಗೂ ಬಿದ್ದಿತು. ಕಾತರಳಾಗಿ ಆಕೆ ಇತ್ತಲೇ ಬರುತ್ತಿದ್ದಳು. ಇನ್ನೂ ಅಷ್ಟು ದೂರದಲ್ಲಿರುವಂತೆಯೇ ; ``ಏನೇ ಮಹಾದೇವಿ ! ಏನದು, ರಾಜಪರಿವಾರ ಬಂದಿತ್ತಂತಲ್ಲ. ನಿಮ್ಮ ಮನೆಗೆ ? ಎಂದು ಏದುತ್ತಾ ಬಳಿಗೆ ಬಂದಳು.

``ಶಂಕರಿ ಎಲ್ಲವನ್ನೂ ಹೇಳುತ್ತಾಳೆ ಕೇಳು. ನಾನೀಗ ಬಂದುಬಿಡುತ್ತೇನೆ. ಗುರುಗಳ ಬಳಿಗೆ ಹೋಗಿ ಎಂದು ಅವರಿಬ್ಬರನ್ನೂ ಬಿಟ್ಟು ಮುಂದೆ ನಡೆದಳು ಮಹಾದೇವಿ. ಶಂಕರಿ ನಡೆದ ಕಥೆಯನ್ನು ಹೇಳತೊಡಗಿದಳು ದಾಕ್ಷಾಯಿಣಿಗೆ.

ಮಹಾದೇವಿ ಮಠವನ್ನು ತಲುಪಿದಾಗ ಗುರುಗಳು ಅದೇ ತಾನೇ ಪೂಜೆಯನ್ನು ಮುಗಿಸಿ ತಪೋವನದ ತೋಟದಲ್ಲಿ ಹೂವಿನ ಗಿಡಗಳೊಡನೆ ಮಾತನಾಡುತ್ತಿದ್ದರು. ಮಹಾದೇವಿಯನ್ನು ಕಂಡು :