``ಬಾರಮ್ಮಾ.... ಬಾ.... ಇದೇನಮ್ಮ ಈಗ ?
ಸಾಮಾನ್ಯವಾಗಿ ಇಷ್ಟು ಹೊತ್ತಿನಲ್ಲಿ ಅವಳನ್ನು ಅವರು ನಿರೀಕ್ಷಿಸುತ್ತಿರಲಿಲ್ಲ. ಮಹಾದೇವಿ ಬಳಿಗೆ ಬಂದಳು. ಸದಾ ಪ್ರಶಾಂತವಾಗಿ ಜಗಜ್ಜನನಿಯ ಮಂದಹಾಸವೆಂಬಂತೆ ಮಿನುಗುತ್ತಿದ್ದ ಅವಳ ಮುಖದಲ್ಲಿ ಇಂದು ಉದ್ವೇಗ, ಕಾತರತೆ, ಅಶಾಂತಿ, ತಳಮಳಗಳ ತಾಂಡವವನ್ನು ಕಂಡ ಗುರುಲಿಂಗರು ಚಕಿತರಾದರು.
``ಇದೇನು ಮಗಳೇ ! ಏಕೆ ಹೀಗಿದ್ದೀಯ ? ಏನು ಸಮಾಚಾರ ? ಕುಳಿತುಕೋ.
ಇಬ್ಬರೂ ಕುಳಿತುಕೊಂಡರು. ನೆನ್ನೆಯ ಉತ್ಸವ, ರಾಜನ ನೋಟ, ಅದರ ಫಲವಾಗಿ ಇಂದು ಬಂದ ರಾಜಗೆಳೆಯನ ರಾಯಭಾರ, ಅದಕ್ಕೆ ತಂದೆಯ ಉತ್ತರ, ಎಲ್ಲವನ್ನೂ ಮಹಾದೇವಿ ಸಂಕ್ಷಿಪ್ತವಾಗಿ ಹೇಳಿದಳು. ಮತ್ತು ಕೊನೆಯಲ್ಲಿ:
``ಇದು ನನ್ನ ವಿಷಮಪರೀಕ್ಷೆಯ ಕಾಲವೆಂದೇ ತೋರುತ್ತಿದೆ, ಗುರುಗಳೇ. ಈಗ ನಾನೇನು ಮಾಡಬೇಕೆಂಬುದೇ ತೋಚದಂತಾಗಿದೆ. ರಾಜ ಸುಮ್ಮನೆ ಬಿಡಲಾರ. ನನ್ನ ತಂದೆತಾಯಿಗಳು ಎಂತಹ ವಿಪತ್ತನ್ನು ಎದುರಿಸಬೇಕಾಗಿದೆಯೋ ಎಂದಳು.
ಗುರುಲಿಂಗರು ಕೇಳುತ್ತಾ ಕೇಳುತ್ತಾ ಗಂಭೀರರಾದರು. ಅವರ ಮನಸ್ಸು ಅಂತರ್ಮುಖವಾಯಿತು. ಕಣ್ಣು ಮುಚ್ಚಿದರು. ಕ್ಷಣಕಾಲ ಮೌನವಾವರಿಸಿತು. ನಿಧಾನವಾಗಿ ಕಣ್ದೆರೆದು ಹೇಳಿದರು :
``ಹೌದು ಮಗಳೇ, ಇದು ನಿನ್ನ ವಿಷಮ ಪರೀಕ್ಷೆಯ ಕಾಲ.
ಕ್ಷಣಕಾಲ ಮೌನ, ಮತ್ತೆ ಮಹಾದೇವಿಯೇ ಹೇಳಿದಳು :
``ನನ್ನ ರೂಪವೇ ನನಗೆ ಶತ್ರುವಾಗಿ ಕಾಡುತ್ತಿದೆಯಲ್ಲ, ಗುರುಗಳೇ.
ಗುರುಗಳು ಆಲೋಚನಾಪರರನಾಗಿ ಹೇಳಿದರು :
``ನಿನ್ನನ್ನು ಅದು ಕಾಡುತ್ತಿದೆ, ನಿಜ. ಆದರೆ ಅದು ನಿನ್ನ ಶತ್ರುವೋ, ಮಿತ್ರನೋ ಹೇಗೆ ಹೇಳಬಲ್ಲೆ, ತಾಯಿ ? ದೈವಕೃಪೆ, ದುಃಖದ ರೂಪದಲ್ಲಿಯೂ ಬರಬಹುದೆಂದು ನಾನು ಹೇಳುತ್ತಿದ್ದುದನ್ನು ನೆನೆಸಿಕೋ. ದೂರಾನ್ವಯವಾದ ಧ್ವನಿಯೊಂದು ಇದ್ದಂತೆ ತೋರಿತು ಗುರುಗಳ ಮಾತಿನಲ್ಲಿ.
``ಅಂದರೆ... ದೈವಕೃಪೆಯೇ ಈ ರೀತಿಯಲ್ಲಿ ಬಂದಿದೆಯೆಂದು ಭಾವಿಸಿಕೊಳ್ಳಬೇಕೆನ್ನುತ್ತೀರಾ ಗುರುಗಳೇ? ಅಚ್ಚರಿಯಿಂದ ಕೇಳಿದಳು.
``ಅದನ್ನು ನಿರ್ಧರವಾಗಿ ಹೇಗೆ ಹೇಳಲಮ್ಮ? ಆದರೆ ಬಂದುದೆಲ್ಲವನ್ನೂ