``ಅಂದರೆ ?.... ಅರ್ಥವಾಗಲಿಲ್ಲ, ಗುರುಗಳೇ.
``ನಿನ್ನ ಮನಸ್ಸನ್ನು ನಾನು ಚೆನ್ನಾಗಿ ಬಲ್ಲೆ. ಆದುದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ....
``ಹೇಳಿ, ಗುರುಗಳೇ, ಕಾತರತೆಯ ಆತುರ ತುಂಬಿತ್ತು ಮಹಾದೇವಿಯ ಧ್ವನಿಯಲ್ಲಿ.
``ಲೌಕಿಕ ಮದುವೆಯ ಹಂಗೇ ನಿನಗಿಲ್ಲ. ಅದು ನನಗೆ ಗೊತ್ತು. ಆದರೆ ಅದನ್ನು ಈ ಜಗತ್ತು ಸುಲಭವಾಗಿ ಒಪ್ಪಲಾರದು. ಆ ಮಾತು ಹೋಗಲಿ. ಈಗ ಒಂದು ಕೆಲಸವನ್ನು ನೀನು ಮಾಡಬಹುದು. ನಿನ್ನ ಮದುವೆಯ ಜವಾಬ್ದಾರಿಯನ್ನು ನೀನೇ ವಹಿಸಿಕೊಂಡು ಕೌಶಿಕನ ಅರಮನೆಗೆ ಹೋಗು. ಅವನನ್ನು ಗೆಲ್ಲುವುದಕ್ಕೆ ಪ್ರಯತ್ನಿಸು. ಅದು ಒಂದು ವೇಳೆ ಅಸಾಧ್ಯವಾದಾಗ ನಿನ್ನ ಮಾರ್ಗ ನಿನಗೆ ಇದ್ದೇ ಇದೆ. ಆಗ ತಪ್ಪು ನಿನ್ನದಾಗುತ್ತದೆಯೇ ಹೊರತು ನಿನ್ನ ತಂದೆತಾಯಿಗಳದಾಗುವುದಿಲ್ಲ. ಅಲ್ಲಿಗೆ ನಿನ್ನ ಮದುವೆಯ ಪ್ರಯತ್ನ ಸಂಪೂರ್ಣವಾಗಿ ನಿಂತಂತೆ ಆಗುತ್ತದೆ.
ಗುರುಲಿಂಗರ ಮಾತನ್ನು ಕುರಿತು ಸ್ವಲ್ಪ ಕಾಲ ಆಲೋಚಿಸಿದಳು. ಆಲೋಚಿಸಿದಂತೆಲ್ಲಾ ಅವರ ಮಾತಿನ ಅರ್ಥ ಸ್ವಲ್ಪ ಹೆಚ್ಚು ಸ್ಪಷ್ಟವಾದಂತೆ ತೋರಿತು, ಮುಖದಲ್ಲಿ ಕಾಂತಿ ಮಿಂಚಿತು. ಯಾವುದು ತನ್ನ ಜೀವನವನ್ನೇ ಹಿಡಿದೆಳೆದು ನುಂಗಬೇಕೆಂದು ಬಂದ ಮೊಸಳೆಯಂತೆ ಭಯಂಕರವಾಗಿ ಕಂಡಿದ್ದಿತೋ, ಅದೇ ಈಗ ಅವಳನ್ನು ರಕ್ಷಿಸಲು ಬಂದ ತಾರಕನೌಕೆಯಂತೆ ಗೋಚರಿಸಿತು :
``ನಿಜ, ಗುರುಗಳೇ... ನೀವು ಹೇಳಿದಂತೆ, ದೈವಕೃಪೆಯೇ ಈ ರೂಪದಿಂದ ಬಂದಿದೆಯೆಂದು ಭಾವಿಸುತ್ತೇನೆ ಎಂದವಳು ಮತ್ತೇನನ್ನೋ ಯೋಚಿಸುತ್ತಾ : ``ಆದರೆ... ಇದಕ್ಕೆ ನನ್ನ ತಂದೆತಾಯಿಗಳು ಒಪ್ಪುತ್ತಾರೆಯೆ? ಅವರು ಹಿಡಿದ ಹಟವನ್ನೇ ಬಿಡದಿದ್ದರೆ...
``ನಿಜ, ಅದೂ ಸ್ವಲ್ಪಕಷ್ಟಕರವಾದ ಮಾತೇ....
ಮಹಾದೇವಿಯೇ ಅದಕ್ಕೆ ಒಂದು ಉಪಾಯವನ್ನು ಕಂಡುಕೊಂಡಳು.
``ನೀವೇ ಅವರಿಗೆ ಇದರ ಆಗುಹೋಗುಗಳನ್ನೆಲ್ಲಾ ಹೇಳಬೇಕು. ಗುರುಗಳೇ, ಇದರ ಹೊರತು ಬೇರೆ ಮಾರ್ಗವೇ ಇಲ್ಲವೆಂದು ತಿಳಿಸಬೇಕು. ನಿಮ್ಮ ಮಾತನ್ನು ಅವರು ಮೀರುವುದಿಲ್ಲ. ಈಗ ತಂದೆಯವರು ಬರುತ್ತೇನೆಂದಿದ್ದರು. ಅವರ ಜೊತೆಯಲ್ಲಿ ತಾಯಿಯನ್ನೂ ಕಳುಹಿಸುತ್ತೇನೆ. ಇಬ್ಬರಿಗೂ ಹೇಳಿರಿ. ಎಲ್ಲ ಭಾರವನ್ನೂ ಅವರು ನನ್ನ ಮೇಲೆ ಹಾಕಿಬಿಡಲಿ. ಉಳಿದುದನ್ನು ನಿಮ್ಮ ಮಾತಿನ