ಮಹಾದೇವಿ ನೋಡಿದಳು. ಸಾಕ್ಷಾತ್ ಮಹಾದೇವನ ಕರುಣೆಯೇ ಗುರುರೂಪದಿಂದ ಮೂಡಿಬರುತ್ತಿರುವಂತೆ ತೋರಿತು. ತನಗೆ ಅನುಗ್ರಹಿಸುವುದಕ್ಕಾಗಿ ಶ್ರೀಶೈಲಪರ್ವತವೇ ನಡೆದುಬರುತ್ತಿದೆಯೆಂದು ಅನಿಸಿತು ಆಕೆಗೆ.
"ನಾನೇ ಮಠಕ್ಕೆ ಬರಬೇಕೆಂದು ಹೊರಟಿದ್ದೆ. ಅಷ್ಟರಲ್ಲಿ ತಾವು ದಯಮಾಡಿಸುತ್ತಿರುವುದು ಕಾಣಿಸಿತು."
ಓಂಕಾರನ ಮಾತು ಮುಗಿಯುವುದಕ್ಕೆ ಮುನ್ನವೇ ಲಿಂಗಮ್ಮ ಗುರುಪಾದವನ್ನು ತೊಳೆದಳು. ಗುರುಗಳು ಅಲ್ಲಿ ಬಿಟ್ಟ ಹಾವುಗೆಗಳನ್ನು ಶಿಷ್ಯನೊಬ್ಬನು ಎತ್ತಿಕೊಂಡು ಒಳಗೆ ನಡೆದ.
ಅವರಿಗೆ ಸಿದ್ಧವಾಗಿದ್ದ ಮಂಚದ ಮೆಲೆ ಸ್ವಾಮಿಗಳನ್ನು ಬಿಜಯ ಮಾಡಿಸುತ್ತಾ:
"ನೆನ್ನೆ ರಾತ್ರಿ ದಯಮಾಡಿಸಿದರಂತೆ!" ಓಂಕಾರನೆಂದ.
ಸ್ವಾಮಿಗಳು ಕುಳಿತುಕೊಳ್ಳಿತ್ತಾ ಹೇಳಿದರು: "ಹೌದು, ಓಂಕಾರ."
"ಪ್ರವಾಸವೆಲ್ಲಾ ಸುಖಕರವಾಗಿ ಆಯಿತೆ, ಸ್ವಾಮಿ?" ಮತ್ತೆ ಓಂಕಾರನ ಪ್ರಶ್ನೆ.
"ಎಲ್ಲಾ ಮಲ್ಲಿಕಾರ್ಜುನನ ಕೃಪೆ" ಎಂದು ಅತ್ತಿತ್ತನೋಡುತ್ತಾ,
"ಎಲ್ಲಿ ಮಹಾದೇವಿ! ಕಾಣಿಸುವುದಿಲ್ಲವಲ್ಲ.... ಮಹಾದೇವೀ" ಬಾಗಿಲಿನ ಮರೆಯಿಂದ ಮಹಾದೇವಿ ಹೊರಬಿದ್ದುದು ಕಾಣಿಸಿತು.
"ಅದನ್ನೇನು ಹೇಳುತ್ತೀರಿ, ಗುರುಗಳೇ! ಇವತ್ತು ಬೆಳಗಿನಿಂದ ಇವಳನ್ನು ಹಿಡಿಯುವುದೇ ಕಷ್ಟವಾಗಿಬಿಟ್ಟಿದೆ. ಶ್ರೀಶೈಲವೇ ಇಲ್ಲಿಗೆ ಬಂದಿರುವಷ್ಟು ಸಂಭ್ರಮ ಅವಳಿಗೆ!" ಹೇಳಿದ ಓಂಕಾರ.
"ಹೌದೇನಮ್ಮಾ ಮಹಾದೇವಿ.... ಬಾ."
ಗುರುಗಳ ಕರೆಯಿಂದ ಮಹಾದೇವಿ ಧೈರ್ಯಗೊಂಡು ಹತ್ತಿರಹತ್ತಿರ ಬರುತ್ತಿದ್ದಳು. ಕೈಹಿಡಿದು ಗುರುಗಳು ಮಂಚದ ಮೇಲೆ ಕುಳ್ಳಿರಿಸಿಕೊಳ್ಳಲು ಯತ್ನಿಸಿದರು. ಆದರೆ ಮಹಾದೇವಿ ಕೆಳಗೆ ಕುಳಿತಳು ಅವರ ಪಾದಗಳ ಬಳಿ.
ಅವಳ ತಲೆಯನ್ನು ನೇವರಿಸುತ್ತಾ ಕೇಳಿದರು ಗುರುಗಳು:
"ಏನಮ್ಮಾ ಮಹಾದೇವಿ, ಈ ಐದಾರು ತಿಂಗಳುಗಳಲ್ಲಿ ಏನೇನು ಕಲಿತಿದ್ದೀ? ಹೊಸದಾಗಿ ಎಷ್ಟು ವಚನಗಳನ್ನು ಗಟ್ಟಿಮಾಡಿದ್ದೀಯ?"