ಪುಟ:Kadaliya Karpoora.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೮೯

ಬೆಳಕಿನಲ್ಲಿ ನಾನು ನೋಡಿಕೊಳ್ಳುತ್ತೇನೆ.

``ಆಗಲಿ.... ನೀನೀಗ ಹೋಗಿ ಅವರನ್ನು ಕಳುಹಿಸು ಗುರುಗಳು ಹೇಳಿದರು. ಮಹಾದೇವಿ ಎದ್ದು ನಮಸ್ಕರಿಸುತ್ತಾ ಹೇಳಿದಳು.

``ಬೆಟ್ಟದ ಹಾಗೆ ಬಂದದ್ದು ಮಂಜಿನ ಹಾಗೆ ಕರಗಿಹೋದಂತೆ ಅನ್ನಿಸುತ್ತಿದೆ, ಗುರುಗಳೇ, ನಿಜವಾಗಿಯೂ ಹೇಳಬೇಕೆಂದರೆ... ನಾನಿನ್ನು ಮುಂದೆ ಬರುವುದನ್ನು ಎದುರಿಸಲು ಉತ್ಸಾಹದಿಂದ ಇದ್ದೇನೆ. ಆದರೆ ನನ್ನ ತಂದೆ ತಾಯಿಗಳಿಗೆ ಮಾತ್ರ ಇದನ್ನು ನೀವು ಹೇಳಿ ಅವರನ್ನು ಒಪ್ಪಿಸಬೇಕು.

``ಆ ಶಿವನ ಇಚ್ಛೆಯಂತೆ ಎಲ್ಲವೂ ನಡೆಯುತ್ತಿದೆ, ಮಗಳೇ. ಯೋಚಿಸಬೇಡ, ಹೋಗಿ ಅವರನ್ನು ಕಳುಹಿಸು.

ಅವರ ಆಶೀರ್ವಾದವನ್ನು ಧರಿಸಿ ಹೊರಟಳು ಮಹಾದೇವಿ.

ಓಂಕಾರ - ಲಿಂಗಮ್ಮರನ್ನು, ತಮ್ಮ ಅಭಿಪ್ರಾಯಕ್ಕೆ ಒಪ್ಪಿಸುವುದು ಗುರುಲಿಂಗರಿಗೆ ಕಷ್ಟವೇ ಆಯಿತು. ಅವರು ಹೇಳಿದುದನ್ನು ಕೇಳಿ ಓಂಕಾರ ಆಶ್ಚರ್ಯಗೊಂಡ :

``ಇದೇನು ಗುರುಗಳೇ, ನೀವು ಹೇಳುತ್ತಿರುವುದು ! ಆಕೆಗಂತೂ ಈ ಮದುವೆ ಇಷ್ಟವೇ ಇಲ್ಲ. ನಮ್ಮನ್ನು ಕಷ್ಟದಿಂದ ಪಾರುಮಾಡುವುದಕ್ಕಾಗಿ ಮಾತ್ರ ಆಕೆ ಅರಮನೆಗೆ ಹೋಗಬೇಕೆ ? ಎಲ್ಲಿಯಾದರೂ ಉಂಟೇ? ಸಾಧ್ಯವೇ ಇಲ್ಲ. ಬಂದದ್ದೆಲ್ಲಾ ಬರಲಿ, ಶಿವನ ಕರುಣೆಯೊಂದು ನಮಗಿರಲಿ. ನಮ್ಮ ನಿಷ್ಠೆಯನ್ನು ನಾವು ಬಿಡುವುದಿಲ್ಲ ಎಂಬುದೇ ಓಂಕಾರನ ನಿರ್ಧಾರದ ಮಾತಾಗಿತ್ತು. ಲಿಂಗಮ್ಮನೂ ಅದಕ್ಕೆ ದನಿಗೂಡಿಸಿದಳು.

ಗುರುಲಿಂಗರು ಅನೇಕ ರೀತಿಯಲ್ಲಿ ಹೇಳಿದರು. ಇದರಿಂದ ಮಹಾದೇವಿಗೇನೂ ಕಷ್ಟವಿಲ್ಲವೆಂಬ ಮಾತನ್ನು ಸ್ಪಷ್ಟಪಡಿಸಿದರು :

``ಆಕೆ ತನ್ನ ಜೀವನವನ್ನು ತಾನು ರೂಪಿಸಿಕೊಳ್ಳಬಲ್ಲಳು. ನೀವೂ, ನಾನೂ ಈ ಘಟನೆಯೂ ಅದಕ್ಕೆ ನಿಮಿತ್ತ ಮಾತ್ರ. ಅಲ್ಲದೆ ಇದರಿಂದ ನೀವು ತಂದೆ ತಾಯಿಗಳಾಗಿ ನಿಮ್ಮ ಕರ್ತವ್ಯದಿಂದ ಚ್ಯುತರಾದಂತೆಯೂ ಆಗುವುದಿಲ್ಲ. ನಿಮ್ಮ ಮಗಳಿಗೆ, ಅವಳ ಜೀವನವನ್ನು ರೂಪಿಸಿಕೊಳ್ಳುವ ಅವಕಾಶವನ್ನು ಕೊಟ್ಟು ಔದಾರ್ಯಕ್ಕೆ ಪಾತ್ರರಾಗುತ್ತೀರಿ. ಇದನ್ನು ಅರಿಯದ ಸಾಮಾನ್ಯ ಜನ ಏನು ಹೇಳಿಕೊಂಡರೇನು ? ಅದನ್ನು ನೀವು ಲಕ್ಷಿಸಬೇಕಾಗಿಲ್ಲ. ಈ ತ್ಯಾಗಕ್ಕೆ ನೀವು ಸಿದ್ಧರಾಗಲೇಬೇಕಾಗುತ್ತದೆ ಎಂದು ಮುಂತಾಗಿ ಹೇಳಿದ ಗುರುಲಿಂಗರ ಮಾತುಗಳು, ಅವರನ್ನು ಮೂಕರನ್ನಾಗಿ ಮಾಡಿದುವು.