``ನಾವೇನೂ ತಿಳಿಯಲಾರದವರಾಗಿದ್ದೇವೆ, ಗುರುಗಳೇ ಏನೂ ತೋಚದೆ ಹೇಳಿದರು ಇಬ್ಬರೂ.
``ನಿಜ, ಆ ಶಿವನ ವಿನ್ಯಾಸದ ಹಸ್ತವನ್ನು ನಾವೇನು ತಿಳಿಯಬಲ್ಲೆವು. ಆದುದರಿಂದ ಇನ್ನೊಮ್ಮೆ ಅರಮನೆಯಿಂದ ಕರೆ ಬಂದರೆ ಎಲ್ಲವನ್ನೂ ಮಹಾದೇವಿಯ ಮೇಲೆ ಹಾಕಿಬಿಡಿ. ಶಿವನು ಅವಳ ಮೂಲಕ ಏನನ್ನು ನುಡಿಸುತ್ತಾನೋ ! ನಾವು ಈ ಘಟನಾರಂಗದಲ್ಲಿ ಪ್ರೇಕ್ಷಕರಾಗಿ ನಿಲ್ಲೋಣ. ನೀವು ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಬಲ್ಲ ದಂಪತಿಗಳೆಂದೇ ಈ ಮಾತುಗಳನ್ನು ಹೇಳುತ್ತಿದ್ದೇನೆ.
ಓಂಕಾರ - ಲಿಂಗಮ್ಮರು ಗುರುಲಿಂಗರ ಮಾತನ್ನು ಮೀರಲಾರದವರಾದರು. ಅವರ ಅಪ್ಪಣೆಯನ್ನು ಪಡೆದು ಮನೆಗೆ ಹಿಂದಿರುಗುವಾಗ ಇದುವರೆಗಿನ ತಮ್ಮ ಮಗಳ ಜೀವನವೆಲ್ಲಾ ಅವರ ಮನಃಪಟಲದ ಮುಂದೆ ಸುಳಿಸುಳಿದು ಮರೆಯಾಗುತ್ತಿತ್ತು.
೫
ಸಂಜೆಗೆ ಮುನ್ನವೇ ಮತ್ತೆ ಬಂದಿತು, ವಸಂತಕನ ಸವಾರಿ. ಈ ಬಾರಿ ವಿಶೇಷ ಆಡಂಬರವೇನೂ ಇಲ್ಲದೆ, ಜೊತೆಗೆ ಇನ್ನೊಬ್ಬನನ್ನು ಮಾತ್ರ ಕರೆದುಕೊಂಡು ಬಂದಿಳಿದ ಕುದುರೆಯಿಂದ.
ಬೆಳಿಗ್ಗೆ ತಾನು ಸ್ವಲ್ಪ ದುಡುಕಿದೇನೇನೋ ಎಂದು ಅನಿಸಿತು ಆತನಿಗೆ. ಈ ಬಾರಿ ಇನ್ನೂ ಹೆಚ್ಚು ಚತುರತೆಯಿದ ವರ್ತಿಸಬೇಕೆಂದು ಆಲೋಚಿಸುತ್ತಲೇ ಬಂದಿದ್ದ. ರಾಜನಿಂದ ಇನ್ನೂ ಹೆಚ್ಚಿನ ಅಧಿಕಾರ ಇವನಿಗೆ ಸಿಕ್ಕಿತ್ತು. ನಿಜ. ಯಾವ ಕ್ಷಣ ಬೇಕಾದರೂ ಅವರನ್ನು ಬಂಧಿಸಿ ಕರೆದೊಯ್ಯಬಹುದಾಗಿತ್ತು. ಆದರೆ ಅದರಿಂದ ವಿಶೇಷ ಪ್ರಯೋಜನವಾಗದೆಂದು ಅವನ ಅಭಿಪ್ರಾಯ. ಅದನ್ನು ಕೌಶಿಕನ ಬಳಿಯಲ್ಲಿ ಹೇಳಿಯೂ ಇದ್ದ.
``ಇದು ಮನಸ್ಸನ್ನು ಒಲಿಸಿಕೊಳ್ಳಬೇಕಾದ ಕರ್ತವ್ಯ ರಾಜೇಂದ್ರ. ಅವಳ ತಂದೆತಾಯಿಗಳನ್ನು ಬಂಧಿಸಿದರೆ ಮಹಾದೇವಿಯ ಮನಸ್ಸನ್ನು ಒಲಿಸಿಕೊಂಡಂತಾಯಿತೆ? ಎಂದು ಕೇಳಿದ್ದ ರಾಜನಿಗೆ.
``ಅದು ನಿಜ, ಆದರೆ ಅವರು ತಮ್ಮ ಹಠವನ್ನೇ ಹಿಡಿದರೆ ಬೇರೆ ಉಪಾಯವೇ ಇಲ್ಲವಲ್ಲ - ಅಲ್ಲಿ ನಡೆದುದೆಲ್ಲವನ್ನೂ ಕೇಳಿದ ಕೌಶಿಕ ಹೇಳಿದ್ದ.