ನಿರಾಶನಾಗಬೇಡ. ಸಂಜೆ ಮತ್ತೊಮ್ಮೆ ಹೋಗುತ್ತೇನೆ. ಬೆಳಿಗ್ಗೆ ನೀನು ಕಳುಹಿಸಿದ ಕಾಣಿಕೆಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದೇನೆ. ಅವೇನೂ ಪರಿಣಾಮ ಮಾಡಲಾರವು. ಸಂಪತ್ತಿನ ಮೇಲಿನ ಆಶೆಯನ್ನು ಮೀರಿನಿಂತ ಭಕ್ತರು ಅವರು. ಈ ಸಂಜೆ ಮತ್ತೆ ಹೋಗಿ ನಿನ್ನ ಪ್ರೇಮದ ಹೃದಯವನ್ನು ವರ್ಣಿಸುತ್ತೇನೆ. ಒಂದು ವೇಳೆ ಅವರು ಏನಾದರೂ ಷರತ್ತುಗಳನ್ನು ಹಾಕಿದರೆ.....
``ಯೋಚಿಸಬೇಡ.... ಅವರು ಏನು ಷರತ್ತು ಹಾಕಿದರೂ ನಾನು ಕೊಡಲು ಸಿದ್ಧನಾಗಿದ್ದೇನೆ. ಬೇಕಾದರೆ ನನ್ನ ರಾಜ್ಯವನ್ನೇ ಅವರಿಗೆ ಧಾರೆ ಎರೆಯುತ್ತೇನೆ.
ರಾಜನ ಆವೇಶದ ಮಾತುಗಳನ್ನು ತಡೆಯುತ್ತಾ ವಸಂತಕ ಹೇಳಿದ :
``ಸಾಕು.... ಸಾಕು. ಅಂತಹ ಸಂದರ್ಭವೇನೂ ಬರಲಾರದು.
``ಒಂದು ವೇಳೆ ಒಳ್ಳೆಯ ಮಾತಿಗೆ ಬಗ್ಗದೇ ಹೋದರೆ ಇದ್ದೇ ಇದೆ, ರಾಜ ದಂಡನೆಯ ಬಲಾತ್ಕಾರ. ಅದಕ್ಕೂ ಸಂಪೂರ್ಣ ಅಧಿಕಾರ ನಿನಗೆ ಕೊಟ್ಟಿದ್ದೇನೆ ಎಂದಿದ್ದ ಕೌಶಿಕ.
ಎಲ್ಲಕ್ಕಿಂತ ಹೆಚ್ಚಾಗಿ ಕೌಶಿಕ ಪಡುತ್ತಿದ್ದ ಮಾನಸಿಕವಾದ ಸಂಕಟ ವಸಂತಕನನ್ನು ಕಾತರಗೊಳಿಸಿತ್ತು. ಒಂದೇ ಒಂದು ದಿನದ ವಿರಹದುಃಖದ ದುರವಸ್ಥೆಯಿಂದ, ತನ್ನ ಗೆಳೆಯ ಕಾಂತಿಗುಂದಿರುವುದನ್ನು ಕಂಡು ಆ ದುಃಖದಿಂದ ಅವನನ್ನು ಹೇಗಾದರೂ ಉದ್ಧರಿಸಬೇಕೆಂಬ ನಿರ್ಧಾರದಿಂದ ಬಂದಿಳಿದಿದ್ದ ಓಂಕಾರನ ಮನೆಯ ಮುಂದೆ.
ಬಹುಶಃ ಇವನನ್ನು ನಿರೀಕ್ಷಿಸಿಯೇ ಇದ್ದ ಓಂಕಾರನಿಗೆ ಈಗ ಅಂತಹ ಆಶ್ಚರ್ಯವೇನೂ ಆಗಲಿಲ್ಲ. ಅವನನ್ನು ಒಳಗೆ ಸ್ವಾಗತಿಸಿ ಕುಳ್ಳಿರಿಸಿದ.
ವಸಂತಕನಿಗೆ ಆಶ್ಚರ್ಯವೇ ಆಯಿತು; ತಾನು ನಿರೀಕ್ಷಿಸಿದುದಕ್ಕಿಂತ ಹೆಚ್ಚಿನ ಸೌಮ್ಯವಾದ ಸ್ವಾಗತ ದೊರೆಯಿತು. ಬೆಳಿಗ್ಗೆ ಓಂಕಾರನ ಮುಖದ ಮೇಲೆ ಕಂಡ ಕೋಪ ಮತ್ತು ತಿರಸ್ಕಾರಗಳು ಈಗ ಇರಲಿಲ್ಲ. ಸಂತೋಷವೂ ಅಲ್ಲದ ಕೋಪವೂ ಅಲ್ಲದ - ನಿರ್ಲಿಪ್ತ ಭಾವವೊಂದು ಅವನ ಮುಖದ ಮೇಲೆ ಇದ್ದಂತೆ ತೋರಿತು. ಗುರುಗಳು ಹೇಳಿದ ಮಾತು ಅವನ ಕೋಪವನ್ನು ಅದುಮಿಟ್ಟಿದ್ದುವು.
ಹೇಗೆ ಮಾತನ್ನು ಪ್ರಾರಂಭಿಸಬೇಕೆಂದು ವಸಂತಕ ಆಲೋಚಿಸುತ್ತಿದ್ದ. ಓಂಕಾರನೇ ಆ ಕಷ್ಟಗಳನ್ನು ಪರಿಹರಿಸಿದ : ``ಏನು ಸ್ವಾಮಿ, ಮತ್ತೆ ದಯಮಾಡಿಸಿದಿರಿ? ರಾಜರು ಏನಾದರೂ ಹೇಳಿದರೋ ?
``ಆಲೋಚಿಸಿ, ಓಂಕಾರ ಶೆಟ್ಟರೆ ! ನಮ್ಮ ರಾಜರ ಮೇಲೆ ನಿಮ್ಮ ಕರುಣೆಯನ್ನು ಇಂದು ನೀವು ಬೀರಬೇಕಾಗಿದೆ. ರಾಜನೇನಾದರೂ ದುಷ್ಟನೇ? ಕ್ರೂರಿಯೇ?