ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ಕದಳಿಯ ಕರ್ಪೂರ

ಪ್ರಜಾಪೀಡಕನೇ ? ಕ್ಷುದ್ರನೇ ? ಎಂದೂ ಅವನು ತನ್ನ ಪ್ರಜೆಗಳನ್ನು ಹಿಂಸಿಸಿದವನಲ್ಲವೆಂಬುದನ್ನು ನೀವೇ ಬಲ್ಲಿರಿ. ತರುಣನಾದರೂ ವಿವೇಚನಾ ಶಕ್ತಿಯನ್ನುಳ್ಳ ನ್ಯಾಯನಿಷ್ಠುರಪರ. ಅವನೆಂದೂ ಯಾವ ಸ್ತ್ರೀಯನ್ನೂ ಕಾಮುಕ ಕಣ್ಣಿನಿಂದ ನೋಡಿದವನಲ್ಲ. ಇದಾವುದೋ ಬಲವತ್ತರವಾದ ಸಂಬಂಧವೆಂದು ತೋರುತ್ತದೆ. ನೆನ್ನೆಯಿಂದ ಅವನ ಸ್ಥಿತಿ ಹೇಳ ತೀರದಂತಾಗಿದೆ. ಅವನ ಮೇಲಿನ ಕರುಣೆಯಿಂದಲಾದರೂ ನೀವು ಉದಾರವಾಗಿ ವರ್ತಿಸಲಾರಿರಾ ?

ತಾನು ಆಲೋಚಿಸಿಕೊಂಡು ಬಂದ ಮಾತುಗಳನ್ನೆಲ್ಲಾ ಓಂಕಾರನ ಮುಂದೆ ಹೇಳಿದ. ಓಂಕಾರನೂ ತಾನೇನು ಮಾತನಾಡಬೇಕೆಂಬುದನ್ನು ನಿರ್ಧರಿಸಿಯೇ ಇದ್ದ.

``ಸ್ವಾಮಿ, ಈ ವಿಚಾರದಲ್ಲಿ ನಾನು ಸ್ವತಂತ್ರನಲ್ಲ. ಇದು ನನ್ನ ಮಗಳ ಜೀವನವನ್ನು ಕುರಿತ ಪ್ರಶ್ನೆ ; ಈಗ ಆಕೆ ಸ್ವತಂತ್ರವಾಗಿ ಆಲೋಚನೆ ಮಾಡಬಲ್ಲವಳಾಗಿದ್ದಾಳೆ. ಈ ವಿಚಾರದಲ್ಲಿ ನಿರ್ಧಾರವನ್ನು ನಾವು ಮಹಾದೇವಿಗೇ ಬಿಟ್ಟಿದ್ದೇವೆ. ಇದು ನನ್ನ ಹೆಂಡತಿಯ ಅಭಿಪ್ರಾಯವೂ ಹೌದು ಎನ್ನುತ್ತಾ ಒಳಗೆ ನೋಡಿದ ಓಂಕಾರ.

ಬಾಗಿಲ ಮರೆಯಲ್ಲಿ ನಿಂತಿದ್ದ ಲಿಂಗಮ್ಮ ಮುಂದೆ ಬರುತ್ತಾ, ``ಹೌದು ಸ್ವಾಮಿ, ಇದೇ ನನ್ನ ಅಭಿಪ್ರಾಯ. ಮಹಾದೇವಿಯನ್ನೇ ನೀವು ವಿಚಾರಿಸಬಹುದು ಎನ್ನುತ್ತಾ ``ಬಾ ಮಹಾದೇವಿ. ನಿನ್ನ ಅಭಿಪ್ರಾಯವೇನೆಂಬುದನ್ನು ಆಲೋಚನೆ ಮಾಡಿ ಹೇಳು. ಅದರಿಂದ ನಡೆದುಕೊಳ್ಳುವುದಕ್ಕೆ ನಾವು ಸಿದ್ಧರಾಗಿದ್ದೇವೆ. ಬಾ ಮುಂದೆ ಎಂದು ಮಗಳನ್ನು ಕರೆದು ಹೇಳಿದಳು.

ಆ ಮಾತುಗಳನ್ನು ಕೇಳುತ್ತಾ ವಸಂತಕ ತನ್ನ ಕಿವಿಗಳನ್ನು ತಾನೇ ನಂಬಲಾರದವನಂತಾಗಿದ್ದ. ಇಂತಹ ಮಾತುಗಳನ್ನು ಅವನು ಓಂಕಾರನಿಂದ ನಿರೀಕ್ಷಿಸಿರಲಿಲ್ಲ. ಬೆಳಗಿನ ಓಂಕಾರನಿಗೂ ಇವನಿಗೂ ಇರುವ ಅಂತರವನ್ನು ಕಂಡು ಅಚ್ಚರಿಯಿಂದ ಅವನ ಮಾತೇ ಕಟ್ಟಿದಂತಾಯಿತು.

ಲಿಂಗಮ್ಮ ಮಹಾದೇವಿಯನ್ನು ಕರೆದೊಡನೆ, ಬೆಳಗಿನ ಆವೇಶದ ರೂಪರಾಶಿಯಿಂದ ಬಂದ ಚಾವಟಿನಂತಹ ಮಾತುಗಳನ್ನು ನೆನಸಿಕೊಂಡನು. ಈಗೇನು ಕಾದಿದೆಯೋ ತನ್ನ ಪಾಲಿಗೆ ಎಂದು ಯೋಚಿಸುತ್ತಿದ್ದಂತೆಯೇ ಮಹಾದೇವಿ ಹೊರಗೆ ಬಂದಳು.