ಪುಟ:Kadaliya Karpoora.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೯೫

ಓಂಕಾರಶೆಟ್ಟಿ, ಲಿಂಗಮ್ಮ ತಮ್ಮ ಮಗಳ ವರ್ತನೆಯನ್ನೂ ಮಾತುಕತೆಗಳನ್ನೂ ದಿಗ್ಭ್ರಮೆಗೊಂಡು ನೋಡುತ್ತಿದ್ದರು. ವಸಂತಕ ಹೋದಮೇಲೂ ಕ್ಷಣಕಾಲ ಹಾಗೇ ನಿಂತಿದ್ದರು ಮೂಕರಂತೆ. ಮಹಾದೇವಿಗೆ ಅವರ ಮನಸ್ಸು ಅರ್ಥವಾಗಿತ್ತು. ನಿಸ್ಸಹಾಯಕಳೆಂಬಂತೆ ಅವರತ್ತ ನೋಡುತ್ತಿದ್ದಳು.

``ಇದೇನು ಮಗಳೇ ! ಉದ್ಗರಿಸಿದಳು ಲಿಂಗಮ್ಮ.

``ಇನ್ನೇನು ಮಾಡಲವ್ವ ? ಇದೊಂದೇ ನನ್ನ ಮುಂದಿದ್ದ ಮಾರ್ಗ. ಮಹಾದೇವಿ ಹೇಳಿದಳು.

``ನಮಗೆ ಎಂತಹ ಧರ್ಮಸಂಕಟವನ್ನು ತಂದಿಟ್ಟೆ ಮಗಳೇ ಓಂಕಾರನ ಧ್ವನಿ ದುಃಖದಿಂದ ಕೂಡಿತ್ತು.

``ಇಲ್ಲ, ಅಪ್ಪಾ... ಧರ್ಮಸಂಕಟದಿಂದ ಪಾರುಮಾಡಿದ್ದೇನೆ. ನೀವು ನಿಶ್ಚಿಂತರಾಗಿರಿ. ಇದನ್ನು ಎದುರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನನಗೆ ಕೊಡಿ.

ರಾತ್ರಿಯೆಲ್ಲಾ ತಂದೆತಾಯಿಗಳನ್ನು ಸಮಾಧಾನಪಡಿಸುವುದರಲ್ಲಿಯೇ ಕಳೆದಳು ಮಹಾದೇವಿ. ಎಷ್ಟು ಹೇಳಿದರೂ ಅವರ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ.

``ನೀನು ಹೀಗೆ ಅರಮನೆಗೆ ಹೋಗುವುದು ಯುಕ್ತವಲ್ಲ, ಮಗಳೇ. ಇದು ವ್ಯವಹಾರವೂ ಅಲ್ಲ. ನೀನು ಮದುವೆಯಾಗದವಳು. ಹೀಗೆ ಒಬ್ಬಳೇ ಅರಮನೆಗೆ ಹೋಗುವುದು ಒಳ್ಳೆಯದೇ? ನಾಳೆ ಪ್ರಪಂಚವೇನೆಂದೀತು ?" ಎನ್ನುವನು ಓಂಕಾರ.

ಲಿಂಗಮ್ಮನೂ ಹಟ ಹಿಡಿದವಳಂತೆ ಅಳಲು ತೊಡಗಿದಳು, ಮಹಾದೇವಿ ಅರಮನೆಗೆ ಹೋಗಕೂಡದೆಂದು. ಮಹಾದೇವಿ ಗುರುಲಿಂಗರು ಹೇಳಿದ ಮಾತುಗಳನ್ನೆಲ್ಲಾ ಮತ್ತೊಮ್ಮೆ ಹೇಳಬೇಕಾಯಿತು. ಕೊನೆಗೆ ನಿಷ್ಠುರವಾಗಿ ಹೇಳಿದಳು:

``ನಿಮಗೆ ನನ್ನ ನಡೆತೆಯ ಮೇಲೆ, ನನ್ನ ನಿಷ್ಠೆಯ ಮೇಲೆ ನಂಬಿಕೆಯಿದ್ದರೆ, ಕೊನೆಗೆ ನನ್ನ ಹಿತದ ಮೇಲೆ ದೃಷ್ಟಿಯಿದ್ದರೆ, ನೀವು ಇದಕ್ಕೆ ಅಡ್ಡಿಬರಕೂಡದು. ನಿಮಗೆ ಕೆಟ್ಟ ಹೆಸರನ್ನು ನಾನು ಖಂಡಿತ ತರುವುದಿಲ್ಲ. ಮಗಳ ದೃಢನಿರ್ಧಾರದ ಮಾತು ಅವರನ್ನು ಮೌನವನ್ನಾಗಿಸಿತು. ಗುರುಲಿಂಗರು ಹೇಳಿದ ಮಾತುಗಳು ಸುಳಿದವು.

`ಈಕೆ ನಮ್ಮ ಮಗಳೆಂಬುದು ನೆಪಮಾತ್ರಕ್ಕೆ. ಅದಾವ ಶಕ್ತಿಯ ಸಾಧನೆಗಾಗಿ ಇವಳ ಜನನವಾಗಿದೆಯೋ....' ಎಂಬ ಭಾವನೆ ಅವರ ಮನಸ್ಸಿನಲಿ ಸುಳಿಯಿತು.