ಪುಟ:Kadaliya Karpoora.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬

ಕದಳಿಯ ಕರ್ಪೂರ

ಓಂಕಾರ ಭಾರವಾದ ಹೃದಯದಿಂದ ಮಹಡಿಯನ್ನೇರಿದ, ಮಲಗುವುದಕ್ಕಾಗಿ. ಲಿಂಗಮ್ಮ - ಮಹಾದೇವಿಯರು ದೇವರ ಮನೆಯ ಪಕ್ಕದಲ್ಲಿದ್ದ ಮಲಗುವ ಕೋಣೆಗೆ ತೆರಳಿದರು. ಮನೆಯ ಕೆಲಸಗಾರರು, ಆಳುಕಾಳುಗಳು ಆಗಲೇ ನಿದ್ರಾಲೋಕದಲ್ಲಿದ್ದರು.

ಮಹಾದೇವಿ ತಂದೆತಾಯಿಗಳನ್ನೇನೋ ಸಮಾಧಾನಗೊಳಿಸಲು ಪ್ರಯತ್ನಿಸಿದಳು. ಆದರೆ ಅವಳ ಮನಸ್ಸಿನ ತಳಮಳ ಅವಳಿಗೇ ಗೊತ್ತು. ನಾಳೆ ನಡೆಯಬಹುದಾದ ಘಟನೆಗಳನ್ನು ಯೋಚಿಸುತ್ತಾ ಅತ್ತ ಇತ್ತ ಹೊರಳಾಡುತ್ತಿದ್ದಳು. ಹಾಸಿಗೆಯ ಮೇಲೆ ಕಣ್ಣು ಮುಚ್ಚಿದರೆ ಸಾಕು, ನೂರಾರು ಆಲೋಚನೆಯ ರೂಪಗಳು ಮುಂದೆ ಬಂದು ನಿಲ್ಲುತ್ತಿದ್ದವು.

`ಕೌಶಿಕನನ್ನು ಹೇಗೆ ಎದುರಿಸುವುದು ? ಮದುವೆಯಾಗದ ನಾನು ಅವನ ಅರಮನೆಯಲ್ಲಿರುವುದು ಸಾಧ್ಯವೇ ? ನನ್ನ ನಿಯಮಗಳಿಗೆ ಅವನು ಒಪ್ಪಬಹುದೇ? ಒಪ್ಪಿದರೆ ಮದುವೆಯಾಗುವುದೇ ಆತನನ್ನು ?' ಎಂದು. ಅವಳ ಆಲೋಚನಾಸರಣಿ ಹರಿಯುವುದು ಮತ್ತೆ :

`ಛೆ... ನನ್ನ ನಿಯಮಗಳಿಗೆ ಅವನು ಒಪ್ಪುವುದಾದರೆ ಮದುವೆಯ ಅವಶ್ಯಕತೆಯೇ ಇಲ್ಲ. ಅಂತಹವು ನನ್ನ ನಿಯಮಗಳು. ಆದರೆ ಭಾವಾವೇಶದ ಆವೇಗದಲ್ಲಿ ಅವುಗಳನ್ನು ಅಷ್ಟಾಗಿ ವಿಚಾರಿಸದೆ, ಒಪ್ಪಿಗೆ ಕೊಡುವ ಸಂಭವವುಂಟು. ಆದರೆ ಮಾತುಕೊಟ್ಟನಂತರ ಅವುಗಳನ್ನು ಕೊನೆಯವರೆಗೂ ಉಳಿಸಿಕೊಳ್ಳುವನೇ? ನನ್ನಿಂದ ದೈಹಿಕ ಸುಖವನ್ನು ಬಯಸುವುದನ್ನೇ ಬಿಡುವನೇ ?... ಅದು ಹೇಗೆ ಸಾಧ್ಯ? ದೈಹಿಕ ಸುಖಕ್ಕಾಗಿಯೇ ಅಲ್ಲವೇ ಆತ ನನ್ನನ್ನು ಬಯಸುತ್ತಿರುವುದು ? ಹಾಗಿದ್ದರೂ ಅವನ ಅರಮನೆಗೆ ಹೋಗಿ ಅದಕ್ಕೆ ಒಳಗಾಗದೆ ಇರಬಲ್ಲೆನೇ?....'

ಯೋಚಿಸುತ್ತಾ ಹೋದಂತೆ ಯೋಚನೆಯ ದಿಕ್ಕು ಕೊನೆಯನ್ನು ಮುಟ್ಟಿ ಮುಂದೆ ಹೋಗಲಾರದೆ ನಿಲ್ಲುತ್ತಿತ್ತು.

`ಹಾಗಾದರೆ ಅರಮನೆಗೆ ಹೋಗುವುದು ಬೇಡವೇ ?' ಎಂದು ಹೊರಟಲ್ಲಿಗೆ ಮತ್ತೆ ಬರುತ್ತಿತ್ತು.

ಕೊನೆಗೆ ಒಂದು ನಿರ್ಧಾರಕ್ಕೆ ಬಂದಳು :

`ಯೋಚಿಸಿದಷ್ಟೂ ಸಮಸ್ಯೆಗಳೇ ಹೆಚ್ಚು. ಆಲೋಚನೆಯಿಂದ ಬಿಡಿಸಲಾಗದ ಸಮಸ್ಯೆಯಿದು. ಎದುರಿಸಿ ಮೆಟ್ಟಿ ಮೇಲೇರಿಯೇ ಬಿಡಿಸಿಕೊಳ್ಳಬೇಕಾದುದು. ಆದುದರಿಂದ ಈಗಂತೂ ಅರಮನೆಗೆ ಹೋಗುತ್ತೇನೆ. ಅಲ್ಲಿಯೂ ಬಹುಕಾಲ ಇರಲಾರೆನೆಂಬಂತೆ ತೋರುತ್ತದೆ. ಮುಂದೆ ನನ್ನ ಪತಿ ಚೆನ್ನಮಲ್ಲಿಕಾರ್ಜುನ