ಪುಟ:Kadaliya Karpoora Preliminary pages.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xi

ಅರಿಕೆ

ಇದು ಅಕ್ಕಮಹಾದೇವಿ ಜೀವನವನ್ನು ಚಿತ್ರಿಸುವ ಕಾದಂಬರಿ. ಪ್ರಭುದೇವನನ್ನು ಕುರಿತು ನಾನು ಬರೆದಿರುವ `ಪರಿಪೂರ್ಣದೆಡೆಗೆ' ಎಂಬ ಕಾದಂಬರಿಯಲ್ಲಿ ಅನುಸರಿಸಿದ ಮಾರ್ಗವನ್ನೇ ಇಲ್ಲಿಯೂ ಅವಲಂಬಿಸಿದ್ದೇನೆ. ಅಂದರೆ ಪ್ರಧಾನವಾಗಿ ವಚನಗಳನ್ನೇ ಆಧಾರವಾಗಿಟ್ಟುಕೊಂಡು ಅವುಗಳಲ್ಲಿ ಪ್ರತಿಬಿಂಬಿತವಾಗಿರುವ ಅಕ್ಕನ ಉಜ್ವಲವಾದ ವ್ಯಕ್ತಿತ್ವವನ್ನು ಚಿತ್ರಿಸುವ ಪ್ರಯತ್ನ ಇಲ್ಲಿದೆ. ಹರಿಹರನು ಬರೆದಿರುವ `ಮಹಾದೇವಿಯಕ್ಕನ ರಗಳೆ'ಯಲ್ಲಿ ಅಥವಾ ಅಕ್ಕನನ್ನು ಕುರಿತು ಅನಂತರ ರಚಿತವಾದ ಇತರ ಗ್ರಂಥಗಳಲ್ಲಿ ಬರುವ ಚರ್ಚಾಸ್ಪದವಾದ ವಿಚಾರಗಳಿಗೆ ಅಕ್ಕನ ವ್ಯಕ್ತಿತ್ವದ ಹಿನ್ನೆಲೆಯಲ್ಲಿಯೇ ಉತ್ತರವನ್ನು ಕಂಡುಕೊಳ್ಳಲು ಹವಣಿಸಿದ್ದೇನೆ. ಅಕ್ಕನು ಹುಟ್ಟಿ ಬೆಳೆದ ಹಿನ್ನೆಲೆ, ಕೌಶಿಕನ ಪ್ರಸಂಗ, ಅವಳ ದಿಗಂಬರತೆಯ ಮೀಮಾಂಸೆ-ಇವೇ ಮೊದಲಾದ ಸನ್ನಿವೇಶಗಳಲ್ಲಿ ಈ ನೂತನ ದೃಷ್ಟಿಯನ್ನು ಕಾಣಬಹುದು.

ಅಕ್ಕಮಹಾದೇವಿ ಕನ್ನಡನಾಡಿಗೆ ಮಾತ್ರವಲ್ಲ, ಇಡೀ ಜಗತ್ತಿನ ಮಹಿಳಾ ಸಾಧಕರಲ್ಲಿಯೇ ಅಗ್ರಗಣ್ಯಳಾದ ಅಪೂರ್ವ ವ್ಯಕ್ತಿ; ಹೆಣ್ಣುತನ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿ ತೋರಿದ ಮಹಾಶಕ್ತಿ. ಈ ಜಗತ್ತೆಂಬ ಕದಳಿಯಲ್ಲಿ ಅದೊಂದು ಪರಿಮಳಿತ ಕರ್ಪುರದ ಪರಂಜ್ಯೋತಿ. ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ; ಅವರ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ, ಉರಿಯುಂಡ ಕರ್ಪೂರದಂತೆ ತನ್ನ ಭೌತದೇಹವನ್ನು ಮೀರಿ ಬಯಲಾಗುವುದು ಕೂಡಾ ಶ್ರೀಶೈಲದ ಕದಳಿಯ ವನದಲ್ಲಿ.

ಅಕ್ಕ ಐಕ್ಯವಾದ ಆ ಕದಳಿಯ ವನವನ್ನು ಸಂದರ್ಶಿಸುವ ಅಪೂರ್ವವಾದ ಅವಕಾಶ ಹೋದ ವರ್ಷ ನನಗೆ ಉಂಟಾಯಿತು. ಸಿರಿಗೆರೆಯ ತರಳಬಾಳು ಜಗದ್ಗುರುಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸಾಹಸಪೂರ್ಣವಾದ ಆ ಯಾತ್ರೆ ನಡೆಯಿತು. ಶ್ರೀಶೈಲದಿಂದ ಮುಂದೆ ಕಡಿದಾದ ಪರ್ವತಗಳ ಕಾಡುದಾರಿಯಲ್ಲಿ ಕಷ್ಟಪಡುತ್ತಾ ಕದಳಿಯವನಕ್ಕಾಗಿ ನಾವು ನಡೆಯುತ್ತಿರುವಾಗ, ತನ್ನ ವೀರ ವೈರಾಗ್ಯದಿಂದ ಏಕಾಂಗಿಯಾಗಿ ಬಂದು ಕದಳಿಯ ವನವನ್ನು ಸೇರಿದ ಅಕ್ಕಮಹಾದೇವಿಯ ಚಿತ್ರ ಕಣ್ಣುಮುಂದೆ ಸುಳಿಯುತ್ತಿತ್ತು. ಮುಂದೆ ಕದಳಿಯ ವನವನ್ನು ಸೇರಿ, ಅಲ್ಲಿ ನಾವು ಬಸವ ಜಯಂತಿಯ ಸಪ್ತಾಹವನ್ನು ಆಚರಿಸುತ್ತಿರುವಂದು, ಒಂದು ದಿನ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು