ಪುಟ:Kalyaand-asvaami.pdf/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಹಾಗೆ, ಭದ್ರ ಆಧಾರದ ಮೇಲೆ ಸಿದ್ಧವಾಗುತ್ತದೆ ಆತನ ಕಲಾಕೃತಿ.ಇತಿಹಾಸಕಾರನಾದ ಸಂಶೋಧಕನಿಗೂ ಕಲಾವಿದನಾದ ಸಂಶೋಧಕನಿಗೂ ಇರುವ ವ್ಯತ್ಯಾಸವೇನು? ಮೊದಲನೆಯವನು,ದೊರೆತುದನ್ನಷ್ಟೆ ಶಾಸ್ತ್ರೀಯವಾಗಿ ಜೋಡಿಸಿ ದಾಖಲೆ ಮಾಡುತ್ತಾನೆ. ಎರಡನೆಯವನು ತನ್ನ ಕಲಾಪ್ರತಿಭೆಯಿಂದ ಆಗಿನ ಕಾಲದ ಬದುಕಿನ ಪುನರ್ ಸೃಷ್ಟಿಯನ್ನು ಸಾಹಿತ್ಯದಲ್ಲಿ ಸಾಧಿಸುತ್ತಾನೆ.

ಗತಜೀವನದ ಪುನರ್ ಸೃಷ್ಟಿಯೇ ಐತಿಹಾಸಿಕ ಸಾಹಿತ್ಯಕೃತಿಗಳಲ್ಲಿರಬೇಕಾದ ಪ್ರಧಾನ ಅಂಶ. ಆ ಸಂಬಂಧಲ್ಲೂ ವಾಸ್ತವವಾದದಿಂದಲೇ ಬರಹಗಾರ ಪ್ರಭಾವಿತನಾಗಬೇಕಾದುದು ಸಹಜ. ಪ್ರತಿಯೊಬ್ಬ ಲೇಖಕನಲ್ಲೂ ಮೂಲತ: ಇರಬೇಕಾದ ಸಮಾಜಪ್ರಜ್ಞೆ, ಅಂತಹ ಸಾಹಿತ್ಯಸೃಷ್ಟಿಯಲ್ಲೂ ಗಣನೀಯ ಪಾತ್ರ ವಹಿಸುತ್ತದೆ. ಮನೋವಿಶ್ಲೇಷಣೆಯಂತಹ ಪ್ರಾಚೀನವಲ್ಲದ ಪೃಥಕ್ಕರಣ ಸಾಧನ, ಗತಕಾಲದ ಪಾತ್ರಗಳಲ್ಲಿ ಹೆಚ್ಚು ಜೀವ ತುಂಬಲು ಸಹಾಯಕವಾಗುತ್ತದೆ. ಈ ರೀತಿಯಾಗಿ ರಚಿತವಾಗುವ ಐತಿಹಾಸಿಕ ಹಿನ್ನಲೆಯುಳ್ಳ ಸಾಹಿತ್ಯ ಕೃತಿಗಳು ಹೆಚ್ಚು ಬೆಲೆಬಾಳುತ್ತವೆಂಬುದು ನನ್ನ ಅಭಿಮತ.

  • * * * *

ಮೇಲಿನ ನೆಲೆಯಲ್ಲಿ ನಿಂತು ನಾನು ರಚಿಸಿರುವ ಕಾದಂಬರಿ 'ಕಲ್ಯಾಣ ಸ್ವಾಮಿ'. ಈ ಕೃತಿಯಲ್ಲಿ ನನ್ನ ಹಾರೈಕೆಗಳೆಲ್ಲ ಫಲಿಸಿವೆ ಎಂದು ನಾನು ಹೇಳಲಾರೆ. ಆದರೂ ಇಷ್ಟು ನಿಜಃ ಈ ಕೃತಿ ನನಗೆ ಪೂರ್ಣತೃಪ್ತಿಯನ್ನು ಕೊಡದೇ ಹೋದರೂ ತೀವ್ರವಾದ ಅತೃಪ್ತಿಗೇನೂ ಕಾರಣವಾಗಿಲ್ಲ.


ಇದು, ನೂರಿಪ್ಪತ್ತು ವರ್ಷಗಳಿಗೆ ಹಿಂದಿನ ಕಥೆ.ಕನ್ನಡ ಭೂಭಾಗವಾದ ಕೊಡಗು-ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದುದು. ಭಾರತದ ಮೇಲೆ ಅಂಧಕಾರ ಕವಿಯತೊಡಗಿದ್ದ ಮುಚ್ಚಂಜೆಯ ಹೊತ್ತಿನಲ್ಲಿ ನಡೆದ ಘಟನೆ. ಪ್ರಾದೇಶಿಕ ಕಥೆಯಾದರೂ ರಾಷ್ತ್ರೀಯ ವ್ಯಾಪ್ತಿಯುಳ್ಳುದು. ಅದನ್ನು ಬರೆಯಲು ಹೊರಟಾಗ, ನಾನು ಇದಿರಿಸಬೇಕಾಗಿದ್ದ ಎಡರು ತೊಡರುಗಳ ಪೂರ್ಣಕಲ್ಪನೆ ನನಗೆ ಇರಲೇ ಇಲ್ಲ. ನನಗಿದ್ದ ತಿಳಿವಳಿಕೆಯ ಆಧಾರದ ಮೇಲೆಯೇ ವಿಷಯ ಸಂಗ್ರಹಕ್ಕೆಂದು ಕೈಹಾಕಿದಾಗ, ಇದು ಪುಷ್ಪೋದ್ಯಾನದ ವಿಹಾರವಲ್ಲ,ಎಂಬುದು ಮನವರಿಕೆಯಾಯಿತು.