ಪುಟ:Kalyaand-asvaami.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾತ್ರೆ ಬಹಳ ಹೊತ್ತಿನವರೆಗೂ ಎಚ್ಚರವಾಗಿಯೇ ಇದ್ದ ಗಿರಿಜವ್ವನಿಗೆ ಮಂಪರು ಬಂದಿತ್ತು ಅದೇ ಆಗ.ಆದರೂ ಗಂಡ ಕರೆದುದು ಕೇಳಿಸಿತು.ಗಡಬಡಿಸಿ ಆಕೆ ಎದ್ದಳು.ಅವಸರವಾಗಿ ಬಾಗಿಲು ತೆರೆದು ಕೇಳಿದಳು: "ಎಷ್ಟೊತ್ತಾಯ್ತು ಬಂದು?ಕರೆದದ್ದು ಕೇಳಿಸ್ಲೇ ಇಲ್ಲ ನಂಗೆ." ತಾಯಿಗೆ ನಿದ್ರಾಭಂಗವಾಗಬಾರದೆಂದು ತಗ್ಗಿದ ಧ್ವನಿಯಲ್ಲೇ ಪುಟ್ಟ ಬಸವನೆಂದ: "ಇದೇ ಈಗ್ಬಂದೆ.ಕರೆದದ್ದು ಒಂದೇ ಸಲ.ಅಷ್ಟರಲ್ಲೇ ನೀನು ಎದ್ಬಿಟ್ಟೆ." "ಊಟವಾಯ್ತಾ?" "ಹೂಂ.ಭಾರೀ ಔತಣ." "ನಾನು ಬಹಳ ಹೊತ್ತು ಎಚ್ಚರವಾಗೇ ಇದ್ದೆ.ಅದು ಹ್ಯಾಗೋ ನಿದ್ದೆ ಬಂದ್ಬಿಡ್ತು." "ಇರಲಿ ಬಿಡು.ಅವ್ವ ಮಲಕೊಂಡಳಾ?" ಪುಟ್ಟಬಸವನ ದೃಷ್ಟಿಯಾಗಲೆ ತನ್ನ ತಾಯಿ ಮಲಗುವ ಜಾಗವನ್ನು ನೋಡಿತ್ತು.ಅಲ್ಲಿ ಆಕೆ ಇರಲಿಲ್ಲ.ಮಗ ಬಂದೇ ಬರುವನೆಂದು ತಿಳಿದಿದ್ದ ಆಕೆ ,ಅಡುಗೆ ಮನೆಯಲ್ಲೇ ಮಲಗಿದ್ದಳು. "ಹೂಂ.ಎಲ್ಲರೂ ಬಂದವರಾ?" "ಇಲ್ಲ.ಕರ್ತು ಒಬ್ನೇ ಬಂದಿರೋದು.ಚಾಪೆ ಹಾಸಿದಿಯಾ?" "ಹೂಂ" "ಬಿಂದಿಗೆ ನೀರು?" "ಮಡಗಿವ್ನಿ" ಕುದುರೆಗಳ ಬಳಿಗೊಮ್ಮೆ ಹೋಗಿ ಬಂದ ಕರ್ತು ಚಾಪೆಯ ಮೇಲೆ ಮೈ ಚಾಚುತಿದ್ದ.ತನ್ನನ್ನು ಕುರಿತೇ ಮಾತು ನಡೆದಿರಬೇಕೆಂದು ಶಂಕಿಸಿ ಆತ ಹೇಳಿದ: "ನಾನು ಮಲಕ್ಕೊತೀನಿ ಅಣ್ಣ."