ಪುಟ:Kalyaand-asvaami.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ದುಡಿಮೆಗೆ ಬುನಾದಿ ಹಾಗೂ ಸ್ಫೂರ್ತಿ-ಬಾಲ್ಯದಲ್ಲಿ ನಾನು ಕೇಳಿದ್ದ ಕಥೆ. ಅನಂತರದ ಸಿದ್ದತೆ-ಕೊಡಗು ಕನ್ನಡ ಜಿಲ್ಲೆಗಳ ಇತಿಹಾಸದ ವಾಚನ. ಬಳಿಕ ದೊರೆತ ನೆರೆವಿನ ಮೂಲ, ಕೊಡಗಿನ ಶಿಕ್ಷಣ ತಜ್ಙರಾದ ಶ್ರೀಯುತ ಡಿ.ಎನ್.ಕೃಷ್ಣಯ್ಯನವರು, ನನ್ನ ಕಥಾನಾಯಕನನ್ನು ಕುರಿತು ಬರೆದಿರುವ ಅಭ್ಯಾಸಪೂರ್ಣ ಲೇಖನ.ಜತೆಯಲ್ಲೆ ನಾನು ಓದಿ ಸಂತೋಷಪಟ್ಟದು, ಕನ್ನಡ ಜಿಲ್ಲೆಯ ಆಲೆಟ್ತಿಯ ಶ್ರೀಯುತ ರಾಮಣ್ಣ ಶಗ್ರಿತ್ತಾಯರ,[ಸಮರ್ಥ ಯಕ್ಷಗಾನಕವಿ 'ಆಲೆಟ್ಟ ರಾಮ'ರು] 'ಕಲ್ಯಾಣಪ್ಪನ ಕಾಟಕಾಯಿ' ಯಕ್ಷಗಾನ ಪ್ರಸಂಗದ ಹಸ್ತಪ್ರತಿ. ಕೊನೆಯದಾದರೂ ಬಲು ಮುಖ್ಯವಾದುದು, ನನ್ನ ಕಲ್ಪನೆಯ ಚಿತ್ರವನ್ನು ಪೂರ್ತಿಗೊಳಿಸಲು ರಾಷ್ಟಕವಿ ಗೋವಿಂದ ಪೈಯವರು ನೀಡಿದ ಅಮೂಲ್ಯ ನೆರವು.

ನನ್ನ ತೊಂದರೆಗಳಲ್ಲಿ ಪ್ರಧಾನವಾಗಿದ್ದುದು ಕಥಾನಾಯಕನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯೇ. ನಮ್ಮ ದೇಶವನ್ನು ಹಿಂಡಿ ಹಿಪ್ಪೆಮಾಡಿದ ವಿದೇಶೀಯ ಸುಲಿಗೆಗಾರರ ಪ್ರಕಾರ, ಕಲ್ಯಾಣಸ್ವಾಮಿಯೊಬ್ಬ ದರೋಡೆಗಾರ,ಸ್ವಾರ್ಥಸಾಧಕ, ಕಪಟಿ. ಅವರು ಬರೆದ ಇತಿಹಾಸದಿಂದ ಪ್ರಭಾವಿತರಾದ ಇನ್ನು ಕೆಲವರ ಅಭಿಪ್ರಾಯದಂತೆ, ಆತನೊಬ್ಬ ಹುಲು ಮಾನವ, ನಾಲ್ಕಾರು ಜನ ಸರದಾರರ ಕೈಗೊಂಬೆ....

೧೮೫೭ರಲ್ಲಿ ರಾಷ್ಟ್ರದಾದ್ಯಂತ ನಡೆದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು 'ಸಿಪಾಯರ ದಂಗೆ' ಎಂದು ಕರೆದು ಇತಿಹಾಸ ಬರೆದವರು ಇಂಗ್ಲಿಷರು. ನಮ್ಮ ಹಿರಿಯರು ಓದಿರುವುದು ಆ ಚರಿತ್ರೆಯನ್ನೇ, ನಾವು ಓದಿರುವುದೂ ಅದನ್ನೇ. ಆದರೆ ಈಗ, ೧೮೫೭ರ ಹೋರಾಟಕ್ಕಿದ್ದ ಚಾರಿತ್ರಿಕ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಅಂತೆಯೇ, ಆ ಸಂಭವಕ್ಕೆ ಇಪ್ಪತ್ತೇ ವರ್ಷಗಳ ಹಿಂದಿನ ಕಲ್ಯಾಣಸ್ವಾಮಿಯ ಕಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ನಮಗೆ ಕಷ್ಟವಾಗಬಾರದು.

ಕಲ್ಯಾಣಪ್ಪ ಪುಂಡನೆಂಬುದಕ್ಕೆ ಯಾವ ಆಧಾರಗಳು ಇಲ್ಲ. ಆತ ಜನರನ್ನು ದೋಚಿದನೆಂದು ಯಾರು ಹೇಳುವುದಿಲ್ಲ. ಆತ ಯುದ್ಧ ಸಾರಿದುದು ಇಂಗ್ಲಿಷರ ವಿರುದ್ಧ. ಆತನ ಕಣ್ಣಿದ್ದುದು ಅವರ ಸೈನ್ಯದ ಮೇಲೆ, ಖಜಾನೆಯ ಮೇಲೆ. ತಮಗೆ ಕಂಟಕರಾಗಿದ್ದವರನ್ನು ನರಪಿಶಾಚಿಗಳೆಂದು ಸಾಮ್ರಾಜ್ಯವಾದಿಗಳು ಚಿತ್ರಿಸಿರುವುದು ಹೊಸ ವಿಷಯವಲ್ಲವಷ್ಟೆ?