ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮಯ್ಯನೆಂದ:

  ನಾವು ದಂಡೆಯ ಮೇಲಿರ್ತೇವೆ; ಇಂಗ್ಲಿಷ್ನೋರು ಉಪ್ಪುನೀರು ಕುಡಿದಿರ್ತಾರೆ!
   ಹೌದು. ಉಪ್ಪುನೀರು ಕುಡಿದು, ತಿಮಿಂಗಲದ ಹೊಟ್ಟೇಲಿ ಕಂಪೆನಿಯ ಬ್ಯಾಂಕ್ ತೆರೀಲಿ! ಎಂದ ಕರಿಯಪ್ಪ.
    ಎಲ್ಲರೂ ನಕ್ಕರು.
   ನಂಜಯ್ಯ ಯೋಚಿಸಿ ಹೇಳಿದ:
   ನಾವು ಕೊಡಗಿನಲ್ಲಿ ಈಗಿನಿಂದಲೇ ಇಂಗ್ಲಿಷರ ಮೇಲೆ ಯುದ್ದ ಸಾರಿದ ಹಾಗೇಂತ ಲೆಕ್ಕ. ಆದರೆ ನಮ್ಮ ಸೈನ್ಯ ಮಡಿಕೇರಿಗೆ ನುಗ್ಗೋದು ಕನ್ನಡ ಜಿಲ್ಲೇನ ವಶಪಡಿಸಿಕೊಂಡಮೇಲೆಯೇ. ಅಲ್ವಾ?
    ಪುಟ್ಟಬಸವ ಉತ್ತರಿಸಿದ:
   ಹೌದು, ಅಷ್ಟರವರೆಗೆ ಮುಖಾಮುಖಿಯಾಗಿ ಇಂಗ್ಲಿಷರನ್ನು ಎದುರಿಸದೆಯೇ ಇಲ್ಲಿ ಯುದ್ದ ನಡೀಲಿ.
    ರಾಮಗೌಡನ ಹಣೆಯ ಮೇಲೆ ನೆರಿಗೆ ಮೂಡಿತು. ಕ್ಷಣ ಹೊತ್ತು ಹಾಗೆಯೇ ಇದ್ದು, ಬಳಿಕ ಹಿಂದಿನ ಉತ್ಸಾಹದಿಂದಲೆ. ಆತನೆಂದ:
    ಆಗಲಿ, ಯುದ್ದ ತಂತ್ರದ ದೃಷ್ಟಿಯಿಂದಲೂ ಅದು ಒಳ್ಳೇದು. ನಾವು ಮಂಗಳೂರು ಕಡೆಗೆ ಹೋದಾಗ, ಇಂಗ್ಲಿಷರ ಸೈನ್ಯ ಮಡಿಕೇರಿಯಿಂದ ಸುಳ್ಯಕ್ಕೆ ಬರ್ತದೆ. ಆಗ ಕೊಡಗಿನೊಳಗೆ ಕೆಲಸ ಸುಲಭವಾಗ್ತದೆ. ಆಮೇಲೆ ಮೇಲಿನಿಂದಲೂ ಕೆಳಗಿನಿಂದಲೂ ಎರಡೂ ಕಡೆಯಿಂದ ಒತ್ತಿದರೆ ಅವರು ಪುಡಿಪುಡಿ - ಅಡಕತ್ತರಿಯಲ್ಲಿ ಸಿಕ್ಕಿದ ಅಡಿಕೆಯ ಹಾಗೆ.
     ಸರಿ ಹೇಳಿದಿರಿ ರಾಮಗೌಡರೆ, ಎಂದ ಪುಟ್ಟಬಸವ.
      ನಂಜಯ್ಯ ತಲೆಯಾಡಿಸಿ ನುಡಿದ:
    ಗೌಡರೆ, ನಿಮ್ಮಮಾತು ಕೇಳಿದರೆ ಜೀವಮಾನವೆಲ್ಲಾ ಯುದ್ದ ಭೂಮಿಯಲ್ಲೇ ನೀವು ಕಳೆದಿದೀರೇನೋ ಅಂತ ಯಾರಾದರೂ ಭಾವಿಸ್ಬೇಕು! ಇಂಗ್ಲಿಷ್ನೊರು ಈ ದೇಶಕ್ಕೆ ಬರದೇ ಇದ್ದಿದ್ದರೆ ನಿಮ್ಮಂಥ ದಂಡನಾಯಕನ ಪರಿಚಯ ನಮಗೆ ಆಗ್ತಿರ್ಲಿಲ್ಲ
     ಸಮರಪಟುವೊಬ್ಬನಿಂದ ದೊರೆತ ಪ್ರಶಂಸೆ. ಹ್ರುದಯದ ಅಂತರಾಳದಿಂದಲೆ ಬಂದಿತ್ತು ಮೋಹಕವಾಗಿದ್ದ ಮಾತು.