ಪುಟ:Kalyaand-asvaami.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ "ಹೌದು ಸ್ವಾಮಿಯವರೆ.ನಾವು ಮೊದಲ್ನೇ ಜಯಗಳಿಸೋದು ಕೂಡಾ ಅವತ್ತೆ." ಆಮೊದಲ ದಿನದ ಕಾರ್ಯಕ್ರಮವನ್ನು ಮನಸಿನಲ್ಲಿಯೆ ಚಿತ್ರಿಸಿಕೊಳ್ಳುತ್ತಿದ್ದ ನಂಜಯ್ಯನೆಂದ: "ರಾಮಪ್ಪಯ್ಯ ಒಂದು ಹುಳ ಇದ್ದ ಹಾಗೆ.ಹೊಸಕಿ ಎಸೀಬೇಕು ಬಹಳ ಸುಲಭವಾಗಿ ಆ ಕೆಲಸ ಆಗ್ಬೇಕು.ನಮ್ಮ ಪಾಲಿಗೆ ಯಾವ ನಷ್ಟವೂ ಇಲ್ಲದೆ ಆ ಜಯ ಗಳಿಸ್ಬೇಕು.ಅಲ್ಲವೇ ರಾಮಗೌಡರೆ?" "ಹೌದು ಒಪ್ಪಿದೆ". ಪುಟ್ಟ ಬಸವ ನುಡಿದ: "ಪ್ರತಿ ಸಲವೂ ನಮ್ಮ ದೃಷ್ಟಿ ಹಾಗೆಯೇ ಇರೋದು ಅಗತ್ಯ.ಸುಮ ಸುಮ್ಮನೆ ನಮ್ಮ ಕಡೆ ಯಾವ ಹಾನಿಯೂ ಆಗಬಾರದು.ಸೈನ್ಯ ಅಂದ್ಮೇಲೆ ನಮ್ಮೆಲ್ಲರ ಪ್ರಾಣಕ್ಕೂ ಒಂದೇ ಬೆಲೆ." "ಹೌದು ಸ್ವಾಮಿಯವರೆ." "ಹಾಗಾದರೆ ಸುಳ್ಯವೇ ನಮ್ಮ್ ಮೊದಲ ಠಾಣ್ಯ" "ಹೌದು.ಕೊಡಗಿನಲ್ಲಿ ಹುಟ್ಟಿದ ಈ ಒರತೆ ಬಲಿತುಕೊಳ್ಳೋದು ಸುಳ್ಯದಲ್ಲಿ.ಅಲ್ಲಿ ನದಿಯ ಅಗಲ ಎಷ್ಟು,ಆಳೆಷ್ಟು ಅಂತ ಈಗ್ಲೇ ಕೇಳ್ಬೇಡಿ.ನೀವೇ ನೋಡುವಿರಂತೆ.ಮುಂದೆ ಹೋಗ್ತಾ ಹೋಗ್ತಾ ನದಿ ದೊಡ್ಡದಾಗ್ತದೆ.ಅದಕ್ಕೆ ಉಪನದಿಗಳು ಸೇರ್ತವೆ.ಮಂಗಳೂರು ಮುಡ್ಡೋ ಹೊತ್ತಿಗೆ ನದಿಯೇ ಸಾಗರವಾಗಿರ್ತದೆ." ಪುಟ್ಟಬಸವ ಮನಃಪೂರ್ವಕವಾಗಿ ನುಡಿದ: "ಭೇಷ್ ರಾಮಗೌಡರೆ!ನೀವು ಕಲಿಯೂ ಹೌದು ಕವಿಯೂ ಹೌದು.ಪ್ರತಿಯೊಂದೂ ನಿಮ್ಮ ಈ ಕವಿತ್ವದ ಕಲ್ಪನೆ ಪ್ರಕಾರವೇ ನಡೀತದೆ.ಯಾವ ಸಂದೇಹವೂ ಇಲ್ಲ." ನಂಜಯ್ಯ ತನ್ನ ಜಾಗದಿಂದೆದ್ದು ನಿಧಾನವಾಗಿ ನಡೆದು,ರಾಮಗೌಡನ ಬಳಿಗೆ ಹೋದ.ಗೌಡನ ಮಗ್ಗುಲಲ್ಲಿ ಕುಳಿತು ಆತನ ತೊಡೆಯ ಮೇಲೆ ಅಂಗೈ ಇರಿಸಿದ.ವಿಶ್ವಾಸದ ನೋಟದಿಂದ ರಾಮಗೌಡನ ಕಣ್ಣುಗಳನ್ನು ನೇರವಾಗಿ ದಿಟ್ಟಿಸುತ್ತಾ ಆತ ಕೇಳಿದ: "ಅಣ್ಣ,ನಿಮಗೆ ಸಂಪೂರ್ಣ ತೃಪ್ತಿಯಾಯ್ತೆ?"