ಪುಟ:Kalyaand-asvaami.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಂತಹ 'ನರಪಿಶಾಚಿ' ಕೊಡಗಿನ ಕಲ್ಯಾಣಪ್ಪ!

ರಾಜರಿಗೆ ಸಂಬಂಧಿಸಿದುದು ಮಾತ್ರ ಇತಿಹಾಸವೆಂದು ಭಾವಿಸಿದವರು ಬರೆದುದರಲ್ಲಿ, ಕಲ್ಯಾಣಪ್ಪನ ವಿಷಯವಾಗಿ ದೊರೆಯುವುದು ಎರಡು ಮೂರು ಸಾಲು ಮಾತ್ರ. ಯಾಕೆಂದರೆ, ಕಲ್ಯಾಣಸ್ವಾಮಿ ರಾಜವಂಶಸ್ಥನಲ್ಲ.

ಇಂಗ್ಲಿಷರು ಕೊಡಗಿನ ಮೇಲೆ ನಡೆಸಿದುದು ಅನ್ಯಾಯದ ಯುದ್ಧ. ಅರಸು ವೀರರಾಜೇಂದ್ರನಿಗೆ ಅವರು ಬಗೆದುದು ವಿಶ್ವಾಸದ್ರೋಹ. ಆತನನ್ನು ದೇಶಬಿಟ್ಟು ಓಡಿಸಿದ ವೈಖರಿ, ನಾಗರಿಕರಾದವರೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವಂಥಾದ್ದು. ಅಂತಹ ಘಟನೆಯಿಂದ ಜನ ಕೋಪೋದ್ರಿಕ್ತರಾದರೆಂದು ಭಾವಿಸುವುದರಲ್ಲಿ ಏನೂ ತಪ್ಪಿಲ್ಲ.

ಗಣಪತಿ ಐಗಳ 'ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ'ದಲ್ಲಿ[೧೯೨೩]೨೬೦ನೆ ಪುಟದಲ್ಲಿ, 'ಕೊಡಗು ಸೇನಾಧಿಪತಿಯಾಗಿದ್ದ ಕಲ್ಯಾಣಪ್ಪನ...' ನಾಯಕತ್ವದಲ್ಲಿ ನಡೆದ 'ದಂಗೆ'ಯ ವಿವರವಿದೆ. ['ದಂಗೆ' ಎನ್ನುವ ಪದ ಅರ್ಥವ್ಯಾಪ್ತಿಯುಳ್ಳದೆಂಬುದನ್ನಂತೂ ನಾವೆಲ್ಲಾ ಬಲ್ಲೆವು!] ಕಲ್ಯಾಣಸ್ವಮಿಯು ಕೊಡಗು ಸೈನ್ಯದಲ್ಲಿ ದಳಪತಿಯಾಗಿದ್ದನೆಂಬುದೇ, ವೀರರಾಜನ ಆಪ್ತಕೋಟಿಯಲ್ಲೊಬ್ಬನಾಗಿದ್ದನೆಂಬುದೇ, ನನ್ನ ಅಭಿಪ್ರಾಯ ಕೂಡಾ.ಆತನನ್ನು ಸೇರಿದವರೂ ಪ್ರಮುಖರು. ಅರಸು ವೀರರಾಜನಿಗೆ ಬೇಟೆಯಲ್ಲಿ ಶಿಕ್ಷಕನಾಗಿದ್ದ, ಹಾರುವ ಹಕ್ಕಿಯ ಕಣ್ಣಿಗೇ ಗುರಿ ಹೊಡೆಯಲು ಸಮರ್ಥನಾಗಿದ್ದ, ಚೆಟ್ಟಕುಡಿಯನೂ ಆತನ ತಮ್ಮನೂ ಕಲ್ಯಾಣಸ್ವಾಮಿಯ ಜತೆಗಿದ್ದರು.ಕೊಡಗಿನ ಶರಣಾಗತಿಗೆ ಕಾರಣನಾಗಿದ್ದ ಬೋಪುದಿವಾನನ ಸಂಬಂಧಿಕರೇ ಕಲ್ಯಾಣಸ್ವಾಮಿಯನ್ನು ಕೂಡಿಕೊಂಡರು. ಪ್ರಖ್ಯಾತ ಸರದಾರನಾದ ಹುಲಿ ಕುಂದ ನಂಜಯ್ಯ, ವಿವಿಧನಾಡುಗಳ ಸುಭೇದಾರರು, ಮಾಜಿ ಉದ್ಯೋಗಸ್ಥರೆಷ್ಟೋ ಜನ ಆತನನ್ನು ಹಿಂಬಾಲಿಸಿದರು. ಕಲ್ಯಾಣಸ್ವಾಮಿಯದು ಕಳ್ಳಕಾಕರ ತಂಡವಾಗಿರಲಿಲ್ಲ ಎನ್ನುವುದಕ್ಕೆ ಇಷ್ಟು ಸಾಕು.

ಆ ಸೇನೆಯನ್ನು ಸೇರಿಕೊಂಡವರಂತೂ ನಾನಾ ಜಾತಿಗಳವರು. ವಿದೇಶೀಯರಿಗಿದಿರಾಗಿ, ಲಿಂಗಾಯತರು-ಒಕ್ಕಲಿಗರು, ಹಿಂದೂಗಳು-ಮುಸಲ್ಮಾನರು, ಒಂದಾಗಿ ಹೋರಾಡಿ ಆ ಪ್ರಕರಣ ಕನ್ನಡನಾಡು ಹೆಮ್ಮೆ ಪಡುವಂಥಾದ್ದು. [ಅದರಿಂದ ಇಂದೂ ಕೂಡಾ ನಾವು ಕಲಿಯಬಹುದಾದ, ಕಲಿಯಬೇಕಾದ, ಪಾಠ ಖಂಡಿತವಾಗಿಯೂ ಅಲ್ಪಪ್ರಮಾಣದ್ದಲ್ಲ!]