ಪುಟ:Kalyaand-asvaami.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ದಟ್ಟೈಸಿದ್ದ ವನಸಿರಿಗೆ ಬೆಳುದಿಂಗಳ ಕ್ಷೀರಾಭಿಷೇಕವಾಗುತ್ತಿತ್ತು. ಕೊನೆಯಿಲ್ಲದೆ ಉಲಿಯುತ್ತಿದ್ದ ಎಲೆಗಳ ಮರೆಯಲ್ಲಿ ನಿಂತು ಚಂದಿರ ಆಡು ತ್ತಿದ್ದುದು ಕಣ್ನುಮುಚ್ಛಾಲೆಯಾಟ. ಕಾಡು ಕಡಿದು ಬಯಲು ಮಾಡಿದ್ದ ಕಡೆ ಮಾತ್ರ ಹಾಲು ಹೆಪ್ಪುಗಟ್ತಿ ನಿಂತಿತ್ತು. ಎತ್ತರದಲ್ಲಿ ಬಿಳಿಯ ಮೋಡಗಳು, ನಿಮಿಷವೂ ಬಿಡುವಿಲ್ಲವೆಂಬಂತೆ ಉತ್ತರಾಭಿಮುಖವಾಗಿ ಧಾವಿಸು ತ್ತಿದ್ದುವು. ವೃಕ್ಷರಾಶಿಗೆ ಕಚಗುಳಿ ಇಡುತ್ತ ಒಂದೇ ಸಮನೆ ಬೇಸುತ್ತಿತ್ತು ಕುಳಿರುಗಾಳಿ.

ನಡುಮನೆಯಲ್ಲಿ ಅಗ್ಗಿಷ್ಟಿಕೆ ಉರಿಯುತ್ತಿತ್ತು. ಕೆಂಡಗಳು ಮಿನುಗುತ್ತಿದ್ದುವು. ಅಲ್ಲಿಯೇ ಗೋಡೆಗೊರಗಿ ಕುಳಿತಿದ್ದಳು ಗಿರಿಜವ್ವ, ಮೌನವಾಗಿ.

ಮುದುಕಿ ಮಾತ್ರ ಗೊಣಗುತ್ತಲೇ ಇದ್ದಳು. ಆಕೆ ಗಂಗವ್ವ. ಎರಡು ನರ್ಷಗಳಿಂದ ಮಗನ ಆಗಮನವನ್ನು ಇದಿರು ನೋಡುತ್ತಲೇ ಇದ್ದ ವೃಧ್ದ ಮಾತೆ. ಕಂಬಳಿಯನ್ನು ಬಲವಾಗಿ ಹೊದೆಯುತ್ತ, ಗೋಡೆ ಹಿಡಿದು ನಿಂತು, ತಡವರಿಸುತ್ತ ಆಕೆ ಹೊರಬಂದಳು. ಹೊಸ್ತಿಲು ದಾಟಿದ ಬಳಿಕ ಜಗಲಿ ಬಂತೆ? ಇದು ಜಗಲಿಯೆ? ಅಥವಾ ಅಂಗಳಕ್ಕಿಳಿಯವ ಮೆಟ್ಟಲೆ? - ಎಂದು ಪಾದಗಳು ಶಂಕಿಸಿದುವು. ಪರೆ ಆವರಿಸಿದ್ದ ಕಣ್ಣುಗಳು, ಕತ್ತಲೆಯನ್ನು ಇರಿದು ನೋಡುವಂತೆ ಕಿರಿದುಗೊಳ್ಳುತ್ತ ದೂರಕ್ಕೆ ದಿಟ್ಟಿಸಿದುವು. ಹಾಗೆ ನೋಡಿ ಆಯಾಸವಾಗಲು, ನಿಟ್ಟುಸಿರು ಬಿಟ್ಟು, ಜಗಲಿಯ ಆಡ್ಡಗೋಡೆಯನ್ನು ಆಧರಿಸಿ ಆಕೆ ಆಲ್ಲಿಯೆ ನೆಲದ ಮೇಲೆ ಕುಳಿತಳು. ಹೃದಯದ ಕಳವಳ ನಿತ್ಯದ ಪಲ್ಲವಿಯನ್ನು ಹೊರಗೆಡವಿತು : "ಪುಟ್ಟಬಸ್ಯ ಬರಲಿಲ್ಲಲ್ಲೇ...ಬರಲಿಲ್ಲಲ್ಲೇ ಪುಟ್ಟಬಸ್ಯಾ.." ಕುಳಿತಲ್ಲಿಂದಲೆ ಗಿರಿಜವ್ವ ಹೇಳಿದಳು : "ಬಂದು ಮಲಕ್ಕೊಳ್ಳಿ ಅತ್ತೆಮ್ಮ. ರಾತ್ರಿ ಭಾಳ ಆಯ್ತು." ಸೊಸೆ ಹಾಗೆ ಕರೆದಳೆಂದು ಎದ್ದು ಬರುವವಳೆ ಗಂಗವ್ವ? ಆಕೆ ಅಳ