ಪುಟ:Kalyaand-asvaami.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಉತ್ತರ ಹೇಳುವುದಾಗದೆ ಕಲ್ಯಾಣಸಾಮಿಯ ಕ೦ಠ ಬಿಗಿ, ಕ೦బని ತು೦ಬಲು ನಿರಾಕರಿಸಿದ ಕಣ್ಣಗಳು ಮಿನುಗಿದುವು.

ನಿರಂತರ ಆಶಾವಾದಿಯಾದ ರಾಮಗೌಡನೇ ಅಂದ:

“ಹೋಗಲಿ ಬಿಡಿ. ಇವತ್ತಲ್ಲದಿದ್ದರೆ ನಾಳೆ ಅಲ್ಲಿಯಾದರೂ ಒಟ್ಟಾಗಿಯೇ ಆಗ್ತಿವಿ!"

....ಊರು ಎಚ್ಚರುವುದಕ್ಕೆ ಮು೦ಚೆಯೆ ಆ ವೀರರಿಬ್ಬರನ್ನು, ಸೈನಿಕರ ಬಲವಾದ ಕಾವಲಿನಲ್ಲಿ,ಊರಿನ ಹೊರಗೆ-ಬಿಕ್ರನಕಟ್ಟೆ ಪದವಿಗೆ-ಒಯ್ದರು.

ಶಿಕ್ಷೆ ವಿಧಿಸಲು ಅವರು ಮಾಡುತಿದ್ದ ಸಿದ್ಧತೆಯನ್ನು ಕಲ್ಯಾಣಸಾಮಿ ನೋಡುತ್ತ ನಿ೦ತ.ಗು೦ಡು ತಗುಲಿದ್ದ ಆತನ ಬಲಗೈ ಜೋತಾಡುತಿದ್ದರೂ ಭುಜಗಳು ಇಳಿ ಬಿದ್ದಿರಲಿಲ್ಲ. ఆ ತಲೆ ಬಾಗಿರಲಿಲ್ಲ ಯಾರ ಎದುರಲ್ಲೂ.

ಮೆದುಳು ಜೀವ೦ತವಾಗಿ ತೀಕ್ಷ್ಣವಾಗಿಯೇ ಇತ್ತು ಎ೦ದಿನ೦ತೆ...

ಈ ಸಲದ ಯುದ್ಧ ಮುಗಿದ ಬಳಿಕ ಸದಾಕಾಲವೂ ತನ್ನ ಜತೆಯಲ್ಲೇ ಇರಬೇಕೆಂದಿದ್ದಳು ಗಿರಿಜಾ. ಹುಚ್ಚು ಹುಡುಗಿ! ಇನ್ನು ಆ ತಾಯಿ...

ಆ ಯೋಚನೆಯನ್ನು ಬದಿಗೆ ಸರಿಸಿ ಕಲ್ಯಾಣಸಾಮಿ ಒಮ್ಮೆಲೆ ಚೆಟ್ಟ-ಕತುರ್ರನ್ನು ಸ್ಮರಿಸಿಕೊ೦ಡ...


ವಿಜಯ..ಸೋಲು...ವೀರರಾಜೇ೦ದ್ರರೆಡೆಗೆ ದೂತರನ್ನು ಕಳುಹಿತ್ತು, ಅವರನ್ನು ಕರೆದು ತರಲು, ಈಗ ಈ ಗತಿ. ಸದ್ಯಃ ಅವರು ಹೊರಡದಿದ್ದರೆ ಸಾಕು. ಅಪಾಯ ತಟ್ಟದಿದ್ದರೆ ಸಾಕು....


ದೇಶದ ಸ್ವಾತಂತ್ರ್ಯಗಳಿಸಬೇಕೆನ್ನುವ ಆಸೆ, ಆಸೆಯಾಗಿಯೇ ಉಳಿಯಿತು ಕೊನೆಗೂ....

ತಬ್ಬಲಾಗದ ಮರದ ಬಲಿಷ್ಟ ಕೊಂಬೆಗಳಿಂದ ಎರಡು ಉರುಳುಗಳನ್ನು ಇಳಿಬಿಟ್ಟಿದ್ದರು.ಕೆಳಗೆ ತಾತ್ಕಾಲಿಕವಾದೊಂದು ಅಟ್ಟಣಿಗೆಯಿತ್ತು. ಸುತ್ತಲೂ ವೃತ್ತಾಕಾರವಾಗಿ ಸಶಸ್ತ್ರ ಸೈನಿಕರು ನಿ೦ತಿದ್ದರು.

ಹುರುಕು ಮುರುಕು ಹಿ೦ದೂಸ್ಥಾನಿಯಲ್ಲಿ ಆ ಸೈನ್ಯಾಧಿಪತಿ ಗರ್ಜಿಸಿದ:

"ಹತ್ತಿಸಿ ಮೇಲಕ್ಕೆ! ಸ್ವಾತಂತ್ರದ ರುಚಿ ನೋಡ್ಲಿ!”

ಸೈನಿಕರ ಬಲಾತ್ಕಾರಕ್ಕೆ ಆಸ್ಪದವಿಲ್ಲದಂತೆ ಕಲ್ಯಾಣಸಾಮಿಯೂ ಬ೦ಗರಾಜರೂ ತಾವಾಗಿಯೇ ಅಟ್ಟಣಿಗೆಯನ್ನೇರಿದರು.