ಪುಟ:Kalyaand-asvaami.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಯಾಣಸ್ವಾಮಿ

ಧರಿಸಿ, ಭುಜಕ್ಕೆ ಜೋಡು ನಳಿಗೆಯ ಕೋವಿಯನ್ನು ತೂಗಹಾಕಿ, ಕಂದು ಬಣ್ಣದ ಕುದುರೆಯನ್ನೇರಿ ಮರಳಿ ಬಂದ. ಮುಚ್ಚೆಂಜಾಯಾಗಿತ್ತು ಆಗ. ಸವಾರ ಯಾರೆಂದು ತಿಳಿಯದೆ ತವಕದಿಂದ ಹೊರಬಂದ ತಾಯಿಯನ್ನು ಕುರಿತು ಪುಟ್ಟಬಸವ ಹೇಳಿದ:


"ಅವ್ವ, ಯಾರು ಬಂದಾರೆ ನೋಡು. ಗುರುತು ಸಿಗ್ತೇತೇನು? '


ಆ ರಾತ್ರೆ ಆಕೆ ಬಹಳ ಹೊತ್ತು ಅತ್ತಿದ್ದಳು, - 'ಎಲ್ಲಾ ಶಿವನ ಚಿತ್ತ' ಎಂದು ದೇವರ ಮೇಲೆ ಭಾರ ಹಾಕುತ್ತಾ.


ಅಂದಿನಿಂದಲೂ ಹಾಗೆಯೇ. ಒಮ್ಮಿಂದೊಮ್ಮಲೆ ಪ್ರವಾಸ. ಮತ್ತೆ ಎಂದಾದರೊಮ್ಮೆ ಆಗಮನ. ಆಗ ಸ್ವಾಭಿಮಾನದ ಮಾತುಗಳು- ರಾಜರನ್ನು ಕುರಿತು, ರಾಜ್ಯವನ್ನು ಕುರಿತು.


ಒಮ್ಮೆ ಆತನೆಂದ:


'ಅವ್ವ, ಅಪ್ಪನ್ನ ಕೊಂದಿದ್ರು ನೋಡು. ಅವರೆಲ್ಲ ಈಗ ಇಂಗ್ಲೀಷರ ಕಡೆ ಇರಬೌದು ಅಂತೀನಿ.'


ಹುಟ್ಟುವುದಕ್ಕೆ ಮುಂಚೆಯೇ ಆಗಿದ್ದ ಗಾಯ ಮಗನ ಹೃದಯದಲ್ಲಿನ್ನೂ ಹಸಿರಾಗಿಯೇ ಇತ್ತು ಎಂದು ತಾಯಿಯ ಎದೆ ಉಬ್ಬಿತು.


ಅದರ ಮರುಕ್ಷಣವೆ, ಇಂತಹ ಯೋಚನೆಯಿಂದ ಮಗನಿಗೇನು ಆಪತ್ತು ಸಂಭವಿಸುವುದೋ ಎಂದು ಆಕೆ ಗಾಬರಿಯಾದಳು.

"ಅವರು ಈಗೆಲ್ಲಿರ್ತಾರೋ ಪುಟ್ಟಬಸ್ಯಾ. ಮುದುಕರಾಗಿ ಸತ್ಹೋಗಿರ್ತಾರೆ! " ನಿಜಾಂಶವೂ ಇತ್ತು ಆ ಮಾತಿನಲ್ಲಿ.

"ಅದೂ ಹೌದೆನ್ನು" ಎಂದ ಪುಟ್ಟಬಸವ.


ಒಮ್ಮೊಮ್ಮೆ ಸೊಸೆಯ ಮೇಲೆ ಗಂಗವ್ವನಿಗೆ ಸಿಟ್ಟು ಬರುತ್ತಿತ್ತು. ಸರಿಯಾದ ರೀತಿಯಲ್ಲಿ ಮಗನನ್ನು ಆಕೆ 'ನೋಡುಕೊಳುತ್ತಿಲ್ಲವೆಂಬುದೇ ಗಂಗವ್ವನ ಶಂಕೆ. ಆ ಸಂದೇಹಕ್ಕೆ ಆಧಾರವಿಲ್ಲವೆಂಬುದು ಸ್ಪಷ್ಟವಾದಾಗ 'ಬಂಜೆ ಹುಡುಗಿ' ಎಂದು ಒಂದೆರೆಡು ಸಾರೆ ಸೊಸೆಯನ್ನು ಹಳಿದಿದ್ದಳು. ಆದರೆ ಬೇಗನೆ ಆ ಘಟ್ಟಗಳೆಲ್ಲಾ ದಾಟಿ, ಆಬಾಧಿತವಾದ ಒಲವೇ ಗಿರಿಜವ್ವ