ಪುಟ:Kalyaand-asvaami.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆ ಇರುಳು ಕಳೆದು ಬೆಳಗಾದುದು ಎಂದಿನಂತೆಯೇ. ಗಂಗವ್ವನ ಮಗನ ಸುಳಿವಿರಲಿಲ್ಲ. ಮನೆಗೆ ಮರಳಲಿಲ್ಲ ಗಿರಿಜವ್ವನ ಸ್ವಾಮಿ.

ಅಮಾವಾಸ್ಯೆಯ ಬಳಿಕ ಮತ್ತೆ ಹುಣ್ಣಿಮೆ ಬಂತು. ಆ ರಾತ್ರೆ ದಾಟಿ ಬೆಳಕು ಹರಿದುದು ಮಾತ್ರ ಎಂದಿಗಿಂತ ಭಿನ್ನವಾಗಿ.

ಬಾಗಿಲು ತಟ್ಟಿದ ಸದ್ದಿಗೆ ಎಚ್ಚರಗೊಂಡ ಗಿರಿಜವ್ವ ಗಡಬಡಿಸಿ ಎದ್ದಳು. ಅತ್ತೆಗೆ ಆಗ ಗಾಢ ನಿದ್ದೆ. ಕತ್ತಲೆಯನ್ನು ದಿಟ್ಟಿಸಿ ದಿಟ್ಟಿಸಿ ಬಳಲಿದ್ದ ಆ ಕಣ್ಣುಗಳಿಗೆ ಆಗತಾನೆ ಜೊಂಪು ಹಿಡಿದಿತ್ತು.

ಬಾಗಿಲ ಬಳಿಗೆ ಸರಿದು, ಎದೆಯ ಮೇಲಿನ ಸೆರಗು ಸರಿಪಡಿಸಿಕೊಳ್ಳುತ್ತ, ಗಿರಿಜವ್ವ ನಿಂತಳು. 'ಯಾರು?' ಎಂದು ಕೇಳಬೇಕೆನಿಸಿತು. ಆದರೆ ಗಂಟಿಲಿನಿಂದ ಸ್ವರ ಹೊರಡಲಿಲ್ಲ.

ಪುನಃ ಬಾಗಿಲ ಸದ್ದು. ಜತೆಯಲ್ಲೇ ಕರೆ :

"ಅವ್ವಾ!"

ಕಣ್ಣು ತೆರೆದಿದ್ದ, ಗಿರಿಜೆಯ ದೇವರು! ಇನ್ನು ಕದ ತೆರೆಯಬೇಕು ತಾನು. ಆದರೆ ತನ್ನನ್ನು ಹೆಸರು ಹಿಡಿದು ಅವರು ಕರೆಯಬಾರದೆ? ಒಮ್ಮೆ ಕರೆಯಬಾರದೆ?

"ಗಿರಿಜಾ!"

ಗಿರಿಜವ್ವನ ಹೃದಯ ಕುಣಿಯಿತು. ಎವೆ ಮುಚ್ಚುವುದಕ್ಕೂ ಎಡೆ ಕೊಡದೆ ಆಕೆ ಆಗುಣಿ ತೆಗೆದಳು. ಕದ ಹಿಂದಕ್ಕೆ ಹರಿಯಿತು. ತಿಂಗಳ ಬೆಳಕಿನಲ್ಲಿ ಕಾಣಿಸಿತು, ಜಗಲಿಯ ಮೇಲೆ ಎತ್ತರವಾಗಿ ನಿಂತಿದ್ದ ಪುಟ್ಟಬಸವನ ಆಕೃತಿ. ಗಂಡನೆಡೆಗೆ ಆಕೆ ಧಾವಿಸಿದಳು. ಕುಸಿದು ಬೀಳುವ ಹಾಗಾಯಿತು. ಆತನ ಮೊಣಕಾಲುಗಳನ್ನುಕೈಗಳಿಂದ ಸುತ್ತುವರಿದಳು ಗಿರಿಜವ್ವ. ಆಕೆಯ ಮುಂಗುರುಳನ್ನು ಮುಟ್ಟುತ್ತಾ ಒಲುಮೆ ತುಂಬಿದ ಧ್ವನಿಯಲ್ಲಿ ಪುಟ್ಟಬಸವನೆಂದ :

"ಏಳು ಗಿರಿಜಾ. ನನ್ನ ಜತೇಲಿ ಸ್ನೇಹಿತರು ಬಂದವರೆ...."


ಗಾಬರಿಗೊಂಡು ಗಿರಿಜವ್ವ ಎದ್ದಳು ಆ ಸ್ಥಿತಿಯಲ್ಲಿ ತನ್ನನ್ನು ಹೊರ