ಪುಟ:Kalyaand-asvaami.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಿದ್ದವರು ಆಗಲೆ ನೋಡಿದರೇನೋ ಎಂದು ಆಕೆಗೆ ಲಜ್ಜೆ ಎನಿಸಿತು.

ಪುಟ್ಟಬಸವನೇ ಕೇಳಿದ :

"ಅವ್ವಾ ಹುಷಾರಾಗಿದಾಳಾ?"

"ಹೊಂ. ಎಬ್ಬಿಸ್ಲಾ?" ಎಂದಳು ಗಿರಿಜಾ.

ತಾಯಿ ಎದ್ದಳೆಂದರೆ ಹರ್ಷಾತಿರೇಕದ ರೋದನಕ್ಕೆ ಮೊದಲು. ಅದನ್ನು ತಿಳಿಯದವನಲ್ಲ ಆತ.

"ಈಗ್ಲೇ ಬೇಡ."

ಆ ಎಲ್ಲ ಸುಖಕ್ಕೆ ತಾನೊಬ್ಬಳ್ಳೇ ಹಕ್ಕುದಾರಳಾಗುವುದು ಗಿರಿಜೆಗೂ ಇಷ್ಟವೆನಿಸಿತು.

ಬಂದೂಕನ್ನು ಪುಟ್ಟಬಸವ ಗೋಡೆಯ ಮೂಲೆಗೆ ಒರಗಿ ನಿಲ್ಲಿಸುತ್ತಿದ್ದಂತೆ ಆಕೆ ಕೇಳಿದಳು :

"ಈಗ ಏನು ಮಾಡ್ಲಿ? ರೊಟ್ಟಿ ತಟ್ಲಾ?"

"ತಾಳು, ಅವರನ್ನ ಕೇಳಿ ಹೇಳ್ತೀನಿ."

ಅಂಗಳಕ್ಕಿಳಿದ ಗಂಡನನ್ನು ಜಗಲಿಯ ಅಂಚಿನ ವರೆಗೂ ಹೆಂಡತಿ ಹಿಂಬಾಲಿಸಿ, ತನ್ನವನ ಸ್ನೇಹಿತರು ಯಾರೆಂಬುದನ್ನು ಇಣಕಿ ನೋಡಿದಳು. ಮರಗಳ ಕೆಳಗೆ ನಾಲ್ಕು ಕುದುರೆಗಳು ನಿಂತಿದ್ದುವು. ಅಂಗಳವನ್ನು ಆವರಸಿದ್ದ ಕಟ್ಟೆಯ ಮೇಲೆ ಕಾಲು ಚಾಚಿ ಮೂವರು ಕುಳಿತಿದ್ದರು.

ಅವರ ಬಳಿ ಹೊಗುತ್ತ ಪುಟ್ಟಬಸವ ಕೇಳಿದ :

"ನಂಜಯ್ಯ, ರೊಟ್ಟಿ ಮಾಡಿಸ್ಲಾ? ಏನ್ಹೇಳಿ?"

"ಒಂದು ಬಿಂದಿಗೆ ನೀರು, ಒಂದು ಚಾಪೆ-ಇಷ್ಟೇ ಈಗ ಬೇಕಾದ್ದು. ಉಳಿದದ್ದೆಲ್ಲಾ ನಾಳೆ, ಎಚ್ಚರವಾದ್ಮೇಲೆ."

ಉತ್ತರವಿತ್ತ ಸ್ವರ ಗಿರಿಜವ್ವನಿಗೆ ಪರಿಚಿತವಾಗಿರಲಿಲ್ಲ. ಆನಂತರ ಕೇಳಿಸಿದ ಇನ್ನೊಂದು ಧ್ವನಿಯೂ ಅಷ್ಟೇ.

"ಇದೇ ಈಗ ಬೆಳ್ಳಿ ಮೂಡೈತೆ. ಸ್ವಲ್ಪ ಹೊತ್ತು ಸುಖವಾಗಿ ಮಲಕೋಬೌದಪ್ಪಾ."

"ನಿಮ್ಮಿಷ್ಟ" ಎಂದ ಪುಟ್ಟಬಸವ.

ಒಳಗಿನಿಂದ ಮಣ್ಣಿನ ಗಡಿಗೆಯಲ್ಲಿ ನೀರೂ ತಾಮ್ರದ ಬಿಂದಿಗೆಯೂ ಬಂದವು.