ಪುಟ:Kalyaand-asvaami.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಯಾಣಸ್ವಾಮಿ


"ನನ್ನವ್ವ!"
"ಕೆಟ್ಟುಡುಗ ಎಲ್ಲೋಗಿದ್ಯೊ ಇಷ್ಟು ದಿವಸ?" "ಎಲ್ಲೋದ್ರೂ ನಿನ್ನ ಹತ್ತಿರಕ್ಕೆ ವಾಪಸು ಬಂದೇ ಬರ್ತೇನಲ್ಲವ್ವಾ ನಾನು?"
"ಬರುತಿಯಾ...ಊಂ....ಇಂಗೇ ಮಾಡ್ತಿರು.ಒಂದು ಸಾರ್ತಿ ನೀನು ಬರೋದರೊಳಗೆ ಸತ್ತುಹೋಗಿರ್ತೀನಿ .ನೋಡ್ಕೋ!"
"ಹಾಗೆಲ್ಲಾ ಅನ್ಬೇಡವ್ವಾ!"
"ಅನ್ನಬಾರದಂತೆ,ಅಯ್ಯೋ!"
ಬಳಿಕ,ಸಂತೋಷದಿಂದಲೂ ಸಂಕಟದಿಂದಲೂ ಒತ್ತರಿಸಿಬಂದ ಕಂಬನಿ.
ಅಗ್ಗಿಷ್ಟಿಕೆಯ ಕೆಂಡವನ್ನಾಗಲೆ ಕೆದಕಿ ಗಿರಿಜಾ ಉರಿಮಾಡಿದ್ದಳು.
ಸೊಸೆಯನ್ನು ಕುರಿತು ಅತ್ತೆ ಕೇಳಿದಳು:
"ಮಗನಿಗೆ ಏನ್ಮಾಡ್ಕೊಡ್ತಿಯೆ ಗಿರಿಜಾ?"ಪುಟ್ಟಬಸವನೆಂದ:"ಈಗೇನೂ ಬೇಡವ್ವ.ಮೂರು ಜನ ಸ್ನೇಹಿತರನ್ನು ಕರಕೊಂಡು ಬಂದಿದೀನಿ.ಅವರೆಲ್ಲಾ ನಿದ್ದೆ ಮಾಡ್ತವರೆ.ಬೆಳಗಾದ್ಮೇಲೆ ರೊಟ್ಟಿಯೋ ಗಂಜಿಯೋ ಮಾಡಿದರಾಯ್ತು."
"ನೀನೂ ಮಲಕೋ ಹಂಗಾರೆ."
"ಹೂಂ."
"ಯಾರು ಬಂದಿರೋದು?"
"ನಿನಗೆ ಅವರ ಗುರುತಿಲ್ಲ ಅವ್ವ.ಹೊಸಬರು.""ಮಡಿಕೇರಿಯಿಂದಲೆ ಬಂದಿರಾ?"
"ಹೂನವ್ವಾ."
"ರಾಜರೆಲ್ಲಾ ಚೆಂದಾಕಿದಾರೆ ಅಲ್ವಾ?"
ಒಮ್ಮೆಲೆ ಉತ್ತರ ಬರಲಿಲ್ಲ.
ಪುಟ್ಟಬಸವ ಏನು ಹೇಳಬೇಕೆಂದು ತೋಚದೆ ತಡವರಿಸಿದ.ವಿಷಯ ತಿಳಿದೇ ಇರಲಿಲ್ಲ ತನ್ನ ತಾಯಿಗೆ ಹಾಗಾದರೆ.ಕಿಂವದಂತಿಗಳೂ ಹಬ್ಬಿರಲಿಲ್ಲವೇನೊ ಪುಷ್ಪಗಿರಿಯ ಆ ತಪ್ಪಲಿಗೆ?