ಪುಟ:Kalyaand-asvaami.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪದಗಳನ್ನು ನಿಧಾನವಾಗಿ ಉಚ್ಚರಿಸುತ್ತ ಆತನೆಂದಃ

"ಅಲ್ಲಿಯ ಕಥೆ ಹೇಳಬೇಕಾದ್ದು ಎಷ್ಟೋ ಇದೆ ಅವ್ವಾ."

"ಹಾಗಾ?"

"ಹೂಂ. ಇನ್ನೂ ಕೋಳಿ ಕೂಗಿಲ್ಲ. ಮಲಕೋ."

"ನನ್ನ ನಿದ್ದೆ‍‍ಗಿ‍‍ಷ್ಟು ಬೆಂಕಿ.ನೀನು ಮಲಕೋ ಮಗಾ."

ಪುಟ್ಟಬಸವ ಹೊರಹೋಗಿ ಬಂದ.ನಂಜಯ ಆಷ್ಟರಲ್ಲೆ ಗೊರಕೆ ಹೊಡೆಯುತಿದ್ದ. ಉಳಿದಿಬ್ಬರು ನಿದ್ದೆ ಎಚ್ಚರಗಳ ನಡುವೆ ತೂಗಾಡುತಿದ್ದರು.

ಗಂಗವ್ವನಾಗಲೆ ಸೊಸೆಯೊಡನೆ ಅಡುಗೆ ಮನೆಗೆ ನಡೆದಿದ್ದಳು.

ಪುಟ್ಟಬಸವ ಉಡುಪು ಕಳಚಿಟ್ಟು ತಾಯಿಯ ಚಾಪೆಯ ಮೇಲೆಯೆ ನಿದ್ದೆ ಹೋದ...

....ಅವರೆಲ್ಲರಿಗೂ ಎಚ್ಚರವಾದಾಗ ಸೂರ್ಯನ ಬೆಳಕಿನುಂಡೆ,ಮರಗಳ ರೆಂಬೆಕೊಂಬೆಗಳೆಡೆಯಿಂದ ಮೇಲು ಮೇಲಕ್ಕೆ ನೆಗೆಯುತ್ತ ಸಾಗಿತ್ತು.

ಕುದುರೆಗಳು ಒಂದೆರಡು ಸಾರೆ ಕೆನೆದು, 'ಇಂದು ಪ್ರಯಾಣವಿಲ್ಲವೇ?' ಎಂದು ಕೇಳಿದ ಬಳಿಕ, ಗಿರಿಜನ್ವ ತಂದುಹಾಕಿದ ಹಸಿರು ಹುಲ್ಲನ್ನು ತಿನ್ನುವುದರಲ್ಲೆ ನಿರತವಾಗಿದ್ದುವು.

ಮುಖ ಮಾರ್ಜನ ಮುಗಿಸಿ ಸಂಗಡಿಗರನ್ನು ಪುಟ್ಟಬಸ ನಡು ಮನೆಗೆ ಕರೆದೊಯ್ದ. ಅಕ್ಕಿಯ ರೊಟ್ಟಿಗಳನ್ನು ಎತ್ತರಕ್ಕೆ ಹೇರಿದ್ದ ತಟ್ಟಿ ಇತ್ತು ಮಧ್ಯದಲ್ಲಿ. ಪಾತ್ರೆಯಲ್ಲಿ ಪಲ್ಯವಿತ್ತು. ಎರಡು ಮೂರು ತಂಬಿಗೆ ತುಂಬಾ ನೀರು.

"ತಗೊಳೀಪ್ಪಾ. ಊಟಕ್ಮುಂಚೆ ಓಂದಿಷ್ಟು ರೊಟ್ಟಿತಿನ್ನಿ. ಹಳ್ಳೀ ಜನರ ಅಡುಗೆ ನಿಮಗೆ ರುಚಿಯಾಗ್ತೇತೋ ಇಲ್ಲೋ..." ಎಂದಳು ಗಂಗವ್ವ ಆಡುಗೆ ಮನೆಯ ಬಾಗಿಲ ಬಳಿಯಲ್ಲೆ ಕುಳಿತು. ನಂಜಯ್ಯ ಒಂದು ರೊಟ್ಟಿಯನ್ನು ಎಡಗೈಯಲ್ಲಿರಿಸಿ, ಅದರ ನಡುವೆ ಹಾಕಿಸಿಕೊಂಡ ಪಲ್ಯಕ್ಕೆ ಒಂದು ತುಣುಕನ್ನು ಮುರಿದು ಅದ್ದಿ ಬಾಯಿಗಿಟ್ಟು, ಚಪ್ಪರಿಸಿದ:
"ಆಹಾ! ಈ ರುಚಿ ನೋಡದೆ ಎರಡು ವರ್ಷಕ್ಕೂ ಮೇಲಾಯ್ತು.