ಪುಟ:Kalyaand-asvaami.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಏನ್ರಿ ಪುಟ್ಟಬಸಪ್ನೋರೆ-ಆರಮನೇಲಿ ಆವತ್ತು ರೊಟ್ಟಿ ತಿಂದ್ಮೇಲೆ ಅಂಥಾದ್ದು ಇದೇ ಮೊದಲ್ನೇ ಸಲ.ಹೌದೋ,ಅಲ್ಲೋ?"

"ಯಾವುದಕ್ಕೆ ಯಾವುದನ್ನ ಹೋಲಿಸ್ತೀಯಪ್ಪಾ," ಎಂದಳು ಗಂಗವ್ವ,ತುಸು ಲಜ್ಜೆಗೊಂಡು. ತಟ್ಟಲು ತಾನೂ ನೆರವಾಗಿದ್ದ ಆ ರೊಟ್ಟಿಯನ್ನು ಕುರಿತ ಹೊಗಳಿಕೆ ಆಕೆಗೆ ಇಷ್ಟವಾಯಿತು.

ಆ ಒಳ್ಳೆಯ ಮಾತನ್ನು ಆಡಿದ ವ್ಯಕ್ತಿಯನ್ನು ಪ್ರಯತ್ನಪೂರ್ವಕವಾಗಿ ಗಂಗವ್ವ ದಿಟ್ಟಿಸಿ ನೋಡಿದಳು.

ತಿನ್ನುತ್ತಲಿದ್ದಂತೆ ಪುಟ್ಟಬಸವ, ತನ್ನ ಸ್ನೇಹಿತರ ಪರಿಚಯವನ್ನು ತಾಯಿಗೆ ಮಾಡಿಕೊಟ್ಟ.

"ಇವರು ನೋಡವ್ವ, ಹುಲಿಕುಂದ ನಂಜಯ್ಯೋರು ಅಂತ-ಸರದಾರರು.ನಮಗೆಲ್ಲಾ ದೊಡ್ಡಣ್ಣ ಇದ್ದಹಾಗೆ. ಈ ಇಬ್ಬರು, ಒಡಹುಟ್ಟಿ ದೋರು-ಚೆಟ್ಟಿಕುಡಿಯ,ಕರ್ತಕುಡಿಯ ಅಂತ".

ಮುಖದ ರೂಪುರೇಖೆ ಸ್ಪಷ್ಟವಾಗಿ ಕಾಣಿಸದಿದ್ದರೂ ಅವರನ್ನೂ ಗಂಗವ್ವ ನೆಟ್ಟ ದೃಷ್ಟಿಯಿಂದ ನೋಡಿದಳು.

ಬಾಯಿಯಲ್ಲಿದ್ದುದನ್ನು ನುಂಗಿ,ಒಂದು ಗುಟುಕು ನೀರು ಕುಡಿದು, ಪುನಃ ರೊಟ್ಟಿಯ ತುಣುಕುಗಳನ್ನು ಪಲ್ಯಕ್ಕೆ ಆದ್ದುತ್ತಾ ಪುಟ್ಟಬಸವನೆಂದ :

"ಇವರು ಮಹಾಶೂರರು ಅವ್ವಾ. ಮಹಾರಾಜರಿಗೆ ಆಪ್ತರು. ಹಾರುತ್ತಿರೋ ಹಕ್ಕಿಯ ಕಣ್ಣಿಗೆ ಗುರಿ ಇಟ್ಟು ಹೊಡೀತಾನೆ ಚೆಟ್ಟಕುಡಿಯ. ಮಹಾರಾಜರಿಗೆ ಗುರಿ ಹೊಡೆಯೋಕೆ ಕಲಿಸಿಕೊಟ್ಟರೋದು ಇವನೇ."

"ಹೌದಾ!" ಎಂದಳು ಗಂಗವ್ವ. ಮುಖ್ಯರಾದ ವ್ಯಕ್ತಿಗಳೇ ಬಂದಿದ್ದರು ಮಗನ ಜತೆ. ಕುಡಿಯರಾದರೇನು? ಆಸಾಮಾನ್ಯರಾದವರು.ಮಹಾರಾಜರ ಆಪ್ತರು. ನಂಜಯ್ಯನಂತೂ ತಮ್ಮ ಜನವೇ ಇರಬೇಕು. ಹೆಸರೇ ಹೇಳುವುದಿಲ್ಲವೆ?

ಮಗನ ಸ್ನೇಹಿತರನ್ನು ಉದ್ದೇಶಿಸಿ ಆಕೆಯೆಂದಳು :

"ನೀವೆಲ್ಲಾ ಈ ಕಡೆ ಬರ್ತಿರೋದು ಇದೇ ಮೊದಲ್ನೇಸಾರಿ,ಅಲ್ಲವಾ?"

ನಂಜಯ್ಯ ಉತ್ತರವಿತ್ತ : "ಹೂಂ. ಮಹಾರಾಜರಿದ್ದಾಗ ಬೇಟೆ ಆಡ್ಕೊಂಡು ಇಲ್ಲಿಗೆ ಹತ್ತು