ಪುಟ:Kalyaand-asvaami.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅದು ಹುಣ್ಣಿಮೆಯ ಮಾರನೆಯ ಸಂಜೆ. ಚಂಜೆ. ಚಂದಿರ ಎರಡು ಘಳಿಗೆ ತಡವಾಗಿ ಉದಿಸಿದ. ಪುಟ್ಟಬಸವನಾಗಲೆ ಹಿಂತಿರುಗಿದ್ದ. ಆತನ ಜತೆ ಯಲ್ಲೂ ಆನಂತರವೂ ಆರೆಂಟು ಜನ ಬಂದರು - ಮಹಾರಾಜರ ಆಪ್ತ ಕೋಟೀಯ ವೀರರನ್ನು ಕಾಣಲೆಂದು, ತಾವು ಗುಲಾಮರಾದ ದುರಂತ ಕಥೆಯನ್ನು ಕೇಳಲೆಂದು.

ಬಲು ನಿಧಾನವಾಗಿ ಬಂದವನು ಚೆಟ್ಟಕುಡಿಯ. ಹಕ್ಕಿಗಳ ಚಿಲಿಪಿಲಿಗೆ ಪೊದೆಪೊದರುಗಳ ಸಂವಾದಕ್ಕೆ ಕಿವಿಗೊಡುತ್ತ, ವನದ ಭವ್ಯತೆಯಲ್ಲಿ ತನ್ನ ಇರುವಿಕೆಯನ್ನು ಮರೆಯಲೆತ್ನಿಸುತ್ತ, ಹೊತ್ತು ಕಳೆದಿದ್ದ ಆತನ ಹೃದಯ ಹಗುರವಾಗಿತ್ತು. ಈಗ ಜನ ನೆರೆದುದನ್ನು ನೋಡುತ್ತ ಆತನ ಮುಖ ಅರಳಿತು.

" ಇವರೇ ಚೆಟ್ಟ ಕುಡಿಯ" ಎಂದ, ಉಳಿದವರ ಪರಿಚಯವನ್ನು ಆಗಲೇ ಮಾಡಿಕೊಟ್ಟಿದ್ದ ಪುಟ್ಟಬಸವ.

ಜನ, ಗೌರವದಿಂದ ಚೆಟ್ಟಯನ್ನು ನೋಡಿದರು; ಆತನ ಭುಜದಿಂದ ಅದೇ ಆಗ ಕೆಳಕ್ಕಿಳಿದ ಬಂದೂಕನ್ನು ನೋಡಿದರು.

__ ಹಾರುವ ಹಕ್ಕಿಯ ಕಣ್ಣಿಗೇ ಗುರಿ ಇಡುವ ಸಮರ್ಥ; ಅರಸರ ಶಿಕ್ಷಕ, ಆಪ್ತಮಿತ್ರ...

ಆದರೆ, ಮುಗುಳುನಗೆಯ ಸರಸಸಲ್ಲಾಪದ ವಾತಾವರಣ ಅಲ್ಲಿರುವುದು ಸಾಧ್ಯವಿರಲಿಲ್ಲ. ಎಲ್ಲರನ್ನೂ ಒಂದಾಗಿ ಬಿಗಿದು ಕಟ್ಟುತ್ತಿದ್ದ ಭಾವವೇನೋ ಇತ್ತು ನಿಜ. ಹಾಗೆಯೇ ಅಲ್ಲಿಯೇ, ಪ್ರಭುತ್ವ ನಡೆಸಿತ್ತು-ಎಲ್ಲರ ಎದೆಗಳನ್ನು ಹಿಂಡುತ್ತಿದ್ದ ನೋವೂ ಕೂಡಾ.

"ಬನ್ನಿ, ಬನ್ನಿ."

ಜಗಲಿಯ ಗೋಡೆಗೊರಗಿ ಆ ನಾಲ್ವರೂ ಕೆಳಗೆ ಕುಳಿತರು. ಅವರಿಗೆದುರು, ಎಡದಲ್ಲಿ ಬಲದಲ್ಲಿ, ಅತ್ತ ಇತ್ತ, ಉಳಿದವರು ಜಾಗಹಿಡಿದರು. ದೂರ ದೂರ ಕುಳಿತಿದ್ದರೂ ಅವರೆಲ್ಲರ ದೃಷ್ಟಿಗಳು ಆ ನಾಲ್ವರ ಮೇಲೆಯೇ ನೆಟ್ಟಿದ್ದುವು. ಮೈಯೆಲ್ಲಾ ಕಿವಿಯಾಗಿತ್ತು ಅವರಿಗೆ,